ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಹುಲರ ಕಲಾವತಿ ಬಳಿಕ, ಸೋನಿಯಾರ ವಿದ್ಯಾವತಿ (Sonia Gandhi | Kalavati | Vidyavati | Rahul Gandhi)
 
PTI
ಯುಪಿಎ ಸರ್ಕಾರದ ಮೊದಲ ಅವಧಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಶ್ವಾಸಯಾಚನೆ ಗೊತ್ತುವಳಿಯ ಕುರಿತ ಚರ್ಚೆಯ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವಿದ್ಯುತ್ ಇಲ್ಲದೆ ಕಲಾವತಿ ಎಂಬ ಮಹಿಳೆಯ ಕುಟುಂಬ ಅನುಭವಿಸುತ್ತಿರುವ ಕಷ್ಟಕಾರ್ಪಣ್ಯಗಳನ್ನು ಎಳೆಎಳೆಯಾಗಿ ಸಂಸತ್ತಿನಲ್ಲಿ ಬಿಚ್ಚಿಟ್ಟಿದ್ದರು. ಇದೀಗ ರಾಹುಲ್ ಅಮ್ಮ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೃಪಾಕಟಾಕ್ಷ ವಿದ್ಯಾವತಿ ಎಂಬ ದಲಿತ ಮಹಿಳೆಯ ಮೇಲೆ ಬಿದ್ದಿದೆ.

ಕಾಂಗ್ರೆಸ್ ಅಧ್ಯಕ್ಷೆ ತನ್ನ ಕ್ಷೇತ್ರ ರಾಯ್‌ಬರೇಲಿಗೆ ಭೇಟಿ ನೀಡಿದ್ದ ವೇಳೆ, ಅಗೋರ ಗ್ರಾಮಕ್ಕೆ ಭೇಟಿನೀಡಿ ಅಲ್ಲಿನ ನಿವಾಸಿಗಳೊಂದಿಗೆ ಬೆರೆತರು. ಅಷ್ಟರಲ್ಲಿ ಮಧ್ಯವಯಸ್ಸಿನ ವಿದ್ಯಾವತಿ ಸೋನಿಯಾರ ಕೈಹಿಡಿದು ತನ್ನ ಗುಡಿಸಲಿಗೆ ಕರೆದೊಯ್ದರು. ಅತ್ಯಂತ ದಾರಿದ್ರ್ಯಾವಸ್ಥೆಯ ಗುಡಿಸಲಿನಲ್ಲಿ ತನ್ನ ದುಸ್ಥಿತಿಯನ್ನು ವಿದ್ಯಾವತಿ ಸೋನಿಯಾರಿಗೆ ವಿವರಿಸಿದಾಗ ಚಲಿಸಿಹೋದ ಸೋನಿಯಾ, ಈ ಮಹಿಳೆಗೆ ಇಂದಿರಾ ಆವಾಸ್ ಯೋಜನೆಯಡಿ ಗೃಹನಿರ್ಮಾಣ ಹಾಗೂ ಇತರ ವ್ಯವಸ್ಥೆಗಳನ್ನು ಕಲ್ಪಿಸುವಂತೆ ತನ್ನ ಪ್ರತಿನಿಧಿಗೆ ತಿಳಿಸಿದರು.

ಮನದುಂಬಿದ ವಿದ್ಯಾವತಿ ಸೋನಿಯಾರ ಕೈಗಳನ್ನು ಹಿಡಿದೇ ಇದ್ದರು. ಕ್ಯಾಮರಾಗಳು ಕ್ಲಿಕ್ಕಿಸುತ್ತಲೇ ಇದ್ದವು.

ತಲೆಗೆ ಸೆರಗು ಹೊದ್ದು ಕೈ ಜೋಡಿಸುತ್ತಾ ಬಂದ ಸೋನಿಯಾರನ್ನು ಗ್ರಾಮದ ಹಿರಿಯ ತಲೆಗಳು 'ಬಹು' (ಸೊಸೆ) ಎಂದು ಕೂಗುತ್ತಿದ್ದರು. ತಾನು ಚಲಿಸುತ್ತಿದ್ದ ವಾಹನದಿಂದ ಅಲ್ಲಲ್ಲಿ ಇಳಿದು ಸೇರಿದ್ದ ಜನತೆಗೆ ವಂದಿಸುತ್ತಾ ಯುಪಿಎ ಅಧ್ಯಕ್ಷೆ ಸಾಗಿದರು.

ಉತ್ತರಪ್ರದೇಶಗಲ್ಲಿ ಕಾಂಗ್ರೆಸ್ಸನ್ನು ಮತ್ತೆ ಅಧಿಕಾರಕ್ಕೆ ತರಲು ದಲಿತರ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಇದೀಗ ದಲಿತ ಕೇರಿಗಳತ್ತ ಹೆಚ್ಚಿನ ಗಮನ ಹರಿಸುತ್ತಿರುವುದು ಸುಳ್ಳಲ್ಲ. ಸೋನಿಯಾ ಗಾಂಧಿ ತನ್ನ ಕ್ಷೇತ್ರವಾದ ರಾಯ್‌ಬರೇಲಿಯಲ್ಲಿ ಮೂರು ದಿನಗಳ ಪ್ರವಾಸ ಹಮ್ಮಿಕೊಂಡಿದ್ದಾರೆ. ದಲಿತರ ಮನೆಗಳ ಅಂಗಳದಲ್ಲೇ ಸೋನಿಯಾ ಚೌಪಾಲ್ ಸಭೆಗಳನ್ನು ನಡೆಸಿದರು. ಗ್ರಾಮದಲ್ಲಿ ಪುರುಷರು ಮಹಿಳೆಯರೆನ್ನದೆ, ಸೋನಿಯಾರ ಸುತ್ತಮುತ್ತ ನೆರೆದು ತಮ್ಮ ದಿನನಿತ್ಯದ ಸಮಸ್ಯೆಗಳನ್ನು ಹೇಳಿಕೊಂಡರು.

ಇದಾಗ ಬಳಿಕ ಸೋನಿಯಾ ರಾಮೇಶ್ವರ ಪಾಸಿ ಎಂಬ ವ್ಯಕ್ತಿಯ ಮನೆಗೆ ಭೇಟಿ ನೀಡಿದರು. ಈ ಮನೆಯ ಸ್ಥಿತಿಯೂ ವಿದ್ಯಾವತಿಯ ಮನೆಗಿಂತ ಭಿನ್ನವಾಗಿರಲಿಲ್ಲ.

ಇನ್ನೊಬ್ಬ ಗ್ರಾಮಸ್ಥ ಜುಕಾಖಾನ್ ಎಂಬಾತ ಸೋನಿಯಾರ ಕಾಲಿಬಿದ್ದ. ಮೂರುತಿಂಗಳ ಹಿಂದೆ ತನ್ನ ಪುತ್ರನ ಕೊಲೆಯಾಗಿದ್ದ ತನಗೆ ನ್ಯಾಯ ಒದಗಿಸಬೇಕು ಎಂದು ಬೇಡಿಕೊಂಡ. ಈತನ ಪುತ್ರ ಕೃಷ್ಣ ಎಂಬಾತ ಮೂರುತಿಂಗಳ ಹಿಂದೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದಾರೆ ಎಂಬುದು ಆತನ ದೂರಾಗಿತ್ತು. ಸೋನಿಯಾ ತಕ್ಷಣವೇ ಸ್ಥಳೀಯ ಪೊಲೀಸಧಿಕಾರಿಯನ್ನು ಕರೆಸಿದರು. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿ ಭರವಸೆ ನೀಡಿದರು.

ಚುನಾವಣಾ ನಂತರ ವಂದನೆ ಸಲ್ಲಿಸಲು ಸೋನಿಯಾ ತನ್ನ ಕ್ಷೇತ್ರಕ್ಕೆ ಮೊದಲ ಭೇಟಿ ನೀಡಿದ್ದರೆ ಇದೀಗ ಕೇಂದ್ರದ ಯೋಜನೆ ಪ್ರಕಾರ ಗ್ರಾಮದಲ್ಲಿ ಕೈಗೊಂಡಿರುವ ಕೆಲಸಗಳ ವೀಕ್ಷಣೆ ನಡೆಸುತ್ತಿದ್ದಾರೆ.

ಬುಧವಾರದ ತನಕ ತನ್ನ ಕ್ಷೇತ್ರದಲ್ಲಿ ಉಳಿಯಲಿರುವ ಸೋನಿಯಾ, ಮಂಗಳವಾರ ತನ್ನ ಕ್ಷೇತ್ರದಲ್ಲಿ ಫಿರೋಜ್ ಗಾಂಧಿ ಇಂಜಿನಿಯರಿಂಗ್ ಇನ್ಸಿಟ್ಯೂಟ್‌ನಲ್ಲಿ ರಾಜೀವ್ ಗಾಂಧಿ ಆಸ್ಪತ್ರೆ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ