ಆಯುರ್ವೇದ ಗಿಡಮೂಲಿಕೆಗಳಿಂದ ಹಂದಿಜ್ವರವನ್ನು ತಡೆಗಟ್ಟಬಹುದು ಎಂಬುದಾಗಿ ಯೋಗ ಗುರು ಬಾಬಾ ರಾಮ್‌ದೇವ್ ಹೇಳಿದ್ದಾರೆ. ದಿನಂಪ್ರತಿ ಅಮೃತಬಳ್ಳಿ(ತಿನೋಸ್ಪೋರಾ) ಸೇವಿಸುತ್ತಿದ್ದರೆ, ದೇಹದಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಅವರು ಹೇಳಿದ್ದಾರೆ. ಇದಲ್ಲದೆ ತುಳಸಿ ಎಲೆಗಳ ಸೇವನೆಯೂ ಉಪಯುಕ್ತ ಎಂದೂ ಹೇಳಿದ್ದಾರೆ.
ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಹಾಗೂ ಇತರ ತೊಂದರೆಗಳಿಂದ ಬಳಲುತ್ತಿರುವವರನ್ನು ಈ ರೋಗ ಕಾಡುತ್ತದೆ. ಹಾಗಾಗಿ ರೋಗನಿರೋಧಕ ಶಕ್ತಿಗಳನ್ನು ಹೆಚ್ಚಿಸಿಕೊಂಡರೆ, ಹಂದಿಜ್ವರ ಹತ್ತಿರ ಸುಳಿಯಲು ಸಾಧ್ಯವಿಲ್ಲ ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಬಾಬಾ ಹೇಳಿದ್ದಾರೆ.
ಡೆಂಘಿ, ಚಿಕೂನ್ ಗುನ್ಯಾ ಹಾಗೂ ಶೀತ-ಜ್ವರದಿಂದ ಬಳಲುತ್ತಿದ್ದ ರೋಗಿಗಳನ್ನು ಉಪಚರಿಸುವ ವೇಳೆ ತಾನು ಅಮೃತಬಳ್ಳಿಯನ್ನು ಬಳಸುತ್ತಿದ್ದುದಾಗಿ ಹೇಳಿದ ಅವರು, ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಇದು ಅತ್ಯಂತ ಸಹಾಯಕಾರಿಯಾಗಿದೆ ಎಂದು ತಿಳಿಸಿದರು. ಜನರು ಪಾಶ್ಚಿಮಾತ್ಯ ಔಷಧಿಗಳೊಂದಿಗೆ ಅಮೃತಬಳ್ಳಿ, ತುಳಸಿಯಂತಹ ಎಲೆಗಳನ್ನು ಸೇವಿಸ ಬೇಕು ಎಂದು ಸಲಹೆ ಮಾಡಿರುವ ಬಾಬ, ರೋಗನಿರೋಧಕ ಶಕ್ತಿ ಇರುವ ಗಿಡಬಳ್ಳಿಗಳನ್ನು ಆಹಾರ ರೂಪದಲ್ಲಿ ಸೇವಿಸಲು ಸರ್ಕಾರವೇ ಮಾರ್ಗದರ್ಶನ ನೀಡಬೇಕು ಎಂದು ಅಭಿಪ್ರಾಯಿಸಿದ್ದಾರೆ.