ಆಡುತ್ತಾ ನಲಿಯುತ್ತಾ ಶಾಲಾ ವಿದ್ಯಾಭ್ಯಾಸದಲ್ಲಿ ನಿರತಳಾಗಬೇಕಿದ್ದ ಈ ಈ ಹದಿನೈದರ ಹರೆಯ ಬಾಲೆ ಜೀವನದಲ್ಲಿ ಸಾಕೋಸಾಕು ಎಂಬಷ್ಟನ್ನು ಅನುಭವಿಸಿಬಿಟ್ಟಿದ್ದಾಳೆ. ಎರಡೆರಡು ಬಾರಿ ಮಾರಾಟಕ್ಕೆ ಒಳಗಾದ ಅವಳೀಗ, ತನ್ನ ಖರೀದಿದಾರರಿಂದ ಹೇಗೋ ತಪ್ಪಿಸಿಕೊಂಡಿದ್ದು, ಮಾನವ ಹಕ್ಕುಗಳ ಆಯೋಗದ ಮೊರೆಹೋಗಿದ್ದಾಳೆ.
ಎರಡುವರ್ಷಗಳ ಹಿಂದೆ ಈಕೆ 30ರ ಹರೆಯದ ವ್ಯಕ್ತಿಗೆ 50 ಸಾವಿರ ರೂಪಾಯಿಗೆ ಮಾರಲ್ಪಟ್ಟಿದ್ದಳು. ಎರಡು ವರ್ಷದ ಬಳಿಕ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದಿದ್ದ ಅವಳನ್ನು ಹೆತ್ತವರು ಮತ್ತೆ ಪುನ ಒಂದು ಲಕ್ಷರೂಪಾಯಿಗೆ ಮಾರಾಟಮಾಡಿದ್ದರು.
ಆಗಸ್ಟ್ 5ರಂದು ತನ್ನ ದ್ವಿತೀಯ 'ಪತಿ'ಗೆ 'ಕೈ' ಕೊಡುವಲ್ಲಿ ಯಶಸ್ವಿಯಾಗಿರುವ ಆ ಬಾಲಕಿ ಈ ಸರ್ತಿ ಮತ್ತೆ ತನ್ನ ಹೆತ್ತವರ ಬಳಿ ತೆರಳುವ ತಪ್ಪನ್ನು ಮಾಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾಳೆ. ತಾನು ಮಾನವ ಹಕ್ಕುಗಳ ಆಯೋಗ ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿರುವುದಾಗಿ ಹೇಳುತ್ತಾಳೆ. ಈ ಮೂಲಕ ನನ್ನಂತಹ ಅಪ್ರಾಪ್ತ ವಯಸ್ಸಿನ ಅಸಹಾಯಕ ಬಾಲಕಿಯರ ಲೈಂಗಿಕ ಶೋಷಣೆಯ ವಿರುದ್ಧ ಸಮಾಜಕ್ಕೆ ಬಲವಾದ ಸಂದೇಶ ನೀಡಬೇಕು ಎಂಬುದು ಈ ನೊಂದ ಹುಡುಗಿಯ ಇಚ್ಛೆ.
"ನನ್ನ ತಂದೆ ಬಡವ. ಹಾಗಾಗಿ ಇದರ ಕುರಿತು ತಿಳಿದಿದ್ದವರೂ ಸಹ ಮೌನವಾಗಿದ್ದರು" ಎಂಬುದಾಗಿ ಕಣ್ಣಲ್ಲಿ ನೀರಿಳಿಸುತ್ತಾ ಹೇಳುತ್ತಾಳೆ.
ತನ್ನ ಜೀವನದ ಭಯಾನಕ ಕತೆಯನ್ನು ವಿವರಿಸಿದ ಆಕೆ "ಮೊದಲು ನನ್ನನ್ನು ಪಿಂಜೋರ್‌ನ ವ್ಯಕ್ತಿಯೊಬ್ಬನಿಗೆ 50 ಸಾವಿರಕ್ಕೆ ಮಾರಟ ಮಾಡಲಾಯಿತು. ಅಲ್ಲಿಂದ ತಪ್ಪಿಸಿಕೊಂಡು ಬಂದ ಬಳಿಕ ಕುರುಕ್ಷೇತ್ರ ಮಿಲ್ ಮಾಲಕನೊಬ್ಬ ನನ್ನನ್ನು ಒಂದು ಲಕ್ಷರೂಪಾಯಿಗೆ ಖರೀದಿಸಿದ. ನನ್ನ ಕುಟುಂಬಕ್ಕೆ ಹಣದ ಅವಶ್ಯಕತೆ ಇತ್ತು. ನನ್ನ ತಂದೆಯ ತರಕಾರಿ ಅಂಗಡಿಯಲ್ಲಿ ವ್ಯಾಪಾರ ಚೆನ್ನಾಗಿರಲಿಲ್ಲ. ಇದಕ್ಕಾಗಿ ನನ್ನನ್ನು ಮಾರಾಟ ಮಾಡಲಾಗಿದೆ" ಎಂದು ಹೇಳಿದಳು.
ರಾಜ್ಪುರ ಎಂಬಲ್ಲಿನ ಈ ಹುಡುಗಿ "ಈ ಇಬ್ಬರೂ ಗಂಡಸರು ನನ್ನನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಲೈಂಗಿಕವಾಗಿ ಶೋಷಿಸಿದ್ದಾರೆ. ಮೊದಲಬಾರಿಗೆ ನನ್ನನ್ನು 2007ರ ಜನವರಿ 17ರಂದು ಮಾರಾಟ ಮಾಡಲಾಗಿತ್ತು. ಅಗ ನನಗೆ 13 ವರ್ಷ. ಪಿಂಜೋರಾಕ್ಕೆ ಹೊರಟಿದ್ದ ನನ್ನ ತಂದೆ ಮತ್ತು ತಾಯಿ ತನ್ನನ್ನೂ ಜತೆಗೆ ತೆರಳುವಂತೆ ಹೇಳಿದ್ದರು. ಅಲ್ಲಿಗೆ ತಲುಪಿದ ಬಳಿಕ ಅಲ್ಲಿ ನನ್ನ ಮದುವೆ ಬಗ್ಗೆ ತಿಳಿಸಲಾಯಿತು. ನಂತರದ ದಿನಗಳಲ್ಲಿ ಆತ, ತನ್ನನ್ನೂ 50 ಸಾವಿರ ರೂಪಾಯಿ ಖರೀದಿಸಿರುವುದಾಗಿಯೂ ಮತ್ತು ತಾನು ಆತನ ಇಚ್ಛೆಗೆ ತಕ್ಕಂತೆ ನಡೆದುಕೊಳ್ಳಬೇಕು" ಎಂಬುದಾಗಿ ತಾಕೀತು ಮಾಡಿದ ಎಂದು ಆಕೆ ತನ್ನ ಜೀವನಗಾಥೆಯನ್ನು ವಿವರಿಸಿದ್ದಾಳೆ.