ಕಳೆದ ನವೆಂಬರ್ ತಿಂಗಳಲ್ಲಿ ಮುಂಬೈ ಮೇಲೆ ಮಾರಣಾಂತಿಕ ದಾಳಿ ನಡೆಸಿರುವ ಉಗ್ರರು ಪಾಕಿಸ್ತಾನದಿಂದ ಬಂದಿದ್ದಾರೆ ಎಂಬುದನ್ನು ಜಿಪಿಎಸ್ ದತ್ತಾಂಶಗಳು ಸೂಚಿಸುತ್ತವೆ ಎಂಬುದಾಗಿ ಅಮೆರಿಕದ ಫೆಡರಲ್ ಇನ್ವೆಸ್ಟಿಗೇಶನ್ ಬ್ಯೂರೋ (ಎಫ್‌ಬಿಐ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ನ್ಯಾಯಾಲಯದ ಮುಂದೆ ಹೇಳಿದೆ.
ಜಿಪಿಎಸ್ ದತ್ತಾಂಶಗಳು ಕರಾಚಿಯಿಂದ ಮುಂಬೈತನಕದ ವಿಸ್ತೃತ ನಕಾಶೆಯನ್ನು ತೋರಿಸಿವೆ ಎಂದು ಎಫ್‌ಬಿಐ ಏಜೆಂಟ್ ಒಬ್ಬರು ಹೇಳಿದ್ದಾರೆ.
ಆರು ಅಮೆರಿಕನ್ನರು ಸೇರಿದಂತೆ 166 ಮಂದಿ ಸಾವನ್ನಪ್ಪಿರುವ ಮುಂಬೈದಾಳಿ ಬಳಿಕ ಎಫ್‌ಬಿಐ ಸಹ ತನಿಖೆ ನಡೆಸಿದ್ದು, ಪ್ರಮುಖ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದೆ. ಇದನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು.
ಈ ನರಮೇಧಕ್ಕೆ ಸಂಬಂಧಿಸಿದಂತೆ ಇತರ ಮೂರು ಅಮೆರಿಕ ಪ್ರಜೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲುದ್ದೇಶಿಸಲಿದ್ದು ಅವರು ನ್ಯಾಯಾಲಯಕ್ಕೆ ಸಾಕ್ಷಿ ನೀಡಲಿದ್ದಾರೆ.
ಇವರ ಹೆಸರನ್ನು ಭದ್ರತಾ ಕಾರಣಕ್ಕೆ ಬಹಿರಂಗ ಪಡಿಸುವುದಿಲ್ಲ ಎಂದು ಪ್ರಕರಣದ ಸರ್ಕಾರಿ ವಕೀಲ ಉಜ್ವಲ್ ನಿಖಂ ಹೇಳಿದ್ದಾರೆ.
ಮುಂಬೈ ದಾಳಿ ಕುರಿತು ಪಾಕ್ ಪ್ರಜೆಗಳ ಕೈವಾಡದ ಕುರಿತು ಸಾಕ್ಷಾಧಾರ ಸಾಕಾಗುವುದಿಲ್ಲ ಎಂಬ ಬೊಬ್ಬೆ ಹೊಡೆಯುತ್ತಿರುವ ಪಾಕಿಸ್ತಾನ ಈಗ ಏನು ಹೇಳುತ್ತದೋ ಕಾದುನೋಡಬೇಕಿದೆ.