ಬುಧವಾರ ಅಪರಾಹ್ನ ಪುಣೆಯಲ್ಲಿ 48ರ ಹರೆಯದ ವ್ಯಕ್ತಿ ಹಾಗೂ 50ರ ಹರೆಯದ ಇನ್ನೊಬ್ಬ ಮಹಿಳೆ ಸಾವನ್ನಪ್ಪುವುದರೊಂದಿಗೆ ಈ ಮಾರಣಾಂತಿಕ ರೋಗಕ್ಕೆ 24 ಗಂಟೆಯೊಳಗಾಗಿ 9 ಜನರು ಸಾವನ್ನಪ್ಪಿದ್ದಾರೆ ಮತ್ತು ಒಟ್ಟು ಸಾವಿಗೀಡಾದವರ ಸಂಖ್ಯೆ 17ಕ್ಕೇರಿದೆ.
ನೀತಾ ಮೇಘಾನಿ ಎಂಬವರು ನಾಲ್ಕು ದಿನಗಳ ಹಿಂದೆ ಗಂಭೀರ ಸ್ಥಿತಿಯಲ್ಲಿ ಸಸೂನ್ ಆಸ್ಪತ್ರೆಗೆ ದಾಖಲಾಗಿದ್ದು ಅವರು ಇಂದ ಮಧ್ಯಾಹ್ನ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಮಹಾರಾಷ್ಟ್ರವನ್ನು ಈ ರೋಗವು ಅತ್ಯಂತ ಕೆಟ್ಟದಾಗಿ ಕಾಡಿದ್ದು, ರಾಷ್ಟ್ರದ ಈ ರಾಜ್ಯ ಒಂದರಲ್ಲೇ 12 ಮಂದಿ ಸಾವನ್ನಪ್ಪಿದ್ದಾರೆ.
ಈ ಮಹಾಮಾರಿ ಕ್ಷಿಪ್ರವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪುಣೆ ಮತ್ತು ಮುಂಬೈಗಳಲ್ಲಿ ಎಲ್ಲಾ ಶಾಲಾಕಾಲೇಜು, ಮಾಲ್ ಹಾಗೂ ಚಿತ್ರಮಂದಿರಗಳನ್ನು ಮುಚ್ಚಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಎಲ್ಲಾ ಎಚ್1ಎನ್1 ಸೋಂಕು ಪೀಡಿತ ರೋಗಿಗಳು ಸಾವನ್ನಪ್ಪುತ್ತಿರುವುದು ಜನರಲ್ಲಿ ತೀವ್ರ ಭೀತಿಯನ್ನು ಹುಟ್ಟಿಸಿದೆ.
ಆರೋಗ್ಯ ಸಚಿವರ ಮಕ್ಕಳಿಗೆ ಸೋಂಕು ಈ ಮಧ್ಯೆ ದೆಹಲಿಯ ಆರೋಗ್ಯ ಸಚಿವರ ಇಬ್ಬರು ಮಕ್ಕಳಿಗೆ ಈ ಸೋಂಕು ತಗುಲಿದೆ. ಅವರಿಗೆ ಸಚಿವರ ನಿವಾಸದಲ್ಲೇ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.