ರಾಷ್ಟ್ರವನ್ನೇ ನಡುಗಿಸುತ್ತಿರುವ ಎಚ್1ಎನ್1 ಎಂಬ ಮಾಹಾಮಾರಿಯು ಗುರವಾರ ಹನ್ನೊಂದು ತಿಂಗಳ ಹಸುಳೆ ಹಾಗೂ 75ರ ಹರೆಯದ ಮಹಿಳೆಯೊಬ್ಬರನ್ನು ಆಹುತಿ ತೆಗೆದುಕೊಂಡಿದ್ದು, ರಾಷ್ಟ್ರದಲ್ಲಿ ಸತ್ತವರ ಸಂಖ್ಯೆ ಒಟ್ಟು 19ಕ್ಕೇರಿದೆ.
ಈ ಮಗುವನ್ನು ಚಿಕಿತ್ಸೆಗಾಗಿ ಪುಣೆಯ ಸಸೂನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಮಗು ಗುರುವಾರ ಮುಂಜಾನೆ ಸಾವನ್ನಪ್ಪಿದೆ. ಮಗುವಿನ ಸಾವಿ ಸುದ್ದಿ ಪ್ರಕಟವಾಗಿರುವಂತೆಯೇ ಮಹಿಳೆಯ ಸಾವಿನ ಸುದ್ದಿ ಹೊರಬಿದ್ದಿದೆ. 75ರ ಹರೆಯದ ಮಹಿಳೆ ಪುಣೆಯ ಕೆಇಎಂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಇವರನ್ನು ಕಳೆದ ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಭಾರತದಲ್ಲಿ ಅಧಿಕೃತವಾಗಿ ಒಟ್ಟು 1,193 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 115 ಪ್ರಕರಣಗಳು ಬುಧವಾರ ಒಂದೇ ದಿನ ದಾಖಲಿಗಾದೆ. ಸಾಮೂಹಿಕ ಜನ್ಮಾಷ್ಠಮಿ ಆಚರಣೆಯಿಂದ ದೂರ ಇರುವಂತೆ ಕೇಂದ್ರ ಸರ್ಕಾರವು ಜನತೆಗೆ ಸಲಹೆ ನೀಡಿದೆ. ಅಲ್ಲದೆ ಜನಜಂಗುಳಿ ಇರುವ ಪ್ರದೇಶಗಳಿಗೆ ತೆರಳದಂತೆಯೂ ಹೇಳಿದೆ. ಇಂತೆಡೆಗಳು ವೈರಸ್ ಹಬ್ಬುವಿಕೆ ಸ್ವರ್ಗವಾಗಬಹುದು ಎಂಬ ಹಿನ್ನೆಲೆಯಲ್ಲಿ ಸರ್ಕಾರದ ಈ ಸಲಹೆ ಹೊರಬಿದ್ದಿದೆ. ಗುರುವಾರ ಮತ್ತು ಶುಕ್ರವಾರ ಜನ್ಮಾಷ್ಠಮಿ ಆಚರಿಸಲಾಗುತ್ತಿದೆ.
ಹಂದಿಜ್ವರ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಮುಂಬೈ ಮತ್ತು ಪುಣೆಯ ಎಲ್ಲಾ ಶಾಲಾ ಕಾಲೇಜು ಹಾಗೂ ಮಾಲ್‌ಗಳನ್ನು ಒಂದು ವಾರದ ಕಾಲ ಮುಚ್ಚಲಾಗಿದೆ. ಇದೇ ವೇಳೆ ಚಿತ್ರಮಂದಿರಗಳನ್ನೂ ಮೂರು ದಿನಗಳಕಾಲ ಮುಚ್ಚಲಾಗಿದೆ.