ರಾಷ್ಟ್ರಾದ್ಯಂತ ಸ್ವಾತಂತ್ರ್ಯಾ ದಿನಾಚರಣೆಯನ್ನು ಶಾಂತಿಯುತವಾಗಿ ಆಚರಿಸಲು ಅನುಕೂಲವಾಗುವಂತೆ ಸರ್ವ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂಬುದಾಗಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
"ನಾವು ಎಲ್ಲಾ ರಾಜ್ಯಗಳಿಗೆ ಎಚ್ಚರಿಕೆ ನೀಡಿದ್ದೇವೆ. ಮತ್ತು ಎಲ್ಲಾ ರಾಜ್ಯಗಳು ಸರ್ವಸನ್ನದ್ಧವಾಗಿವೆ. ಎಲ್ಲಾ ರಾಜ್ಯಗಳಲ್ಲೂ ಸ್ವಾತಂತ್ರ್ಯ ದಿನಾಚರಣೆಯು ಶಾಂತಿಯುತವಾಗಿ ನಡೆಯಲಿದೆ ಎಂಬುದನ್ನು ಖಚಿತಪಡಿಸುತ್ತೇವೆ" ಎಂದು ಚಿದಂಬರಂ ಹೇಳಿದ್ದಾರೆ. ಅವರು ಚೆನ್ನೈಯಲ್ಲಿ ಆರಂಭ ಗೊಂಡಿರುವ ಮಹಿಳಾ ರೈಲು ಉದ್ಘಾಟನಾ ಸಮಾರಂಭದ ಪಾರ್ಶ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಈ ಹಿಂದೆ ಗೃಹ ಸಚಿವಾಲಯವು ದೆಹಲಿ, ಕೋಲ್ಕತ, ಹೈದರಾಬಾದಿನಲ್ಲಿ ಭಯೋತ್ಪಾದನಾ ಬೆದರಿಕೆ ಇದೆ ಎಂಬುದಾಗಿ ಎಚ್ಚರಿಕೆ ನೀಡಿತ್ತು. ವಿಶೇಷವಾಗಿ ಕರಾವಳಿ ರಾಜ್ಯಗಳೂ ಸೇರಿದಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ವಾತಂತ್ರ್ಯ ದಿನಾಚರಣೆ ವೇಳೆ ಕಟ್ಟುನಿಟ್ಟಿನ ಪಹರೆ ನಡೆಸಬೇಕು ಎಂದು ಗೃಹಇಲಾಖೆ ಎಚ್ಚರಿಕೆ ನೀಡಿತ್ತು. ಅಲ್ಲದೆ ಪಾಕಿಸ್ತಾನ ಮೂಲದ ಲಷ್ಕರೆ ಸಂಘಟನೆಯು ವಿಧ್ವಂಸಕ ಕೃತ್ಯವನ್ನು ನಡೆಸುವ ಸಾಧ್ಯತೆ ಇದೆ ಗುಪ್ತಚರ ವರದಿಗಳು ಹೇಳಿದ್ದವು.