ಗುರುವಾರ ಪುಣೆಯಲ್ಲಿ ಎಚ್1ಎನ್1 ಮಹಾಮಾರಿಗೆ 37ರ ಹರೆಯದ ಅರ್ಚನಾ ಕೋಲ್‌ಹೆ ಬಲಿಯಾಗುವ ಮೂಲಕ ಪುಣೆಯಲ್ಲಿಯೇ 13ಮಂದಿ ಸೇರಿದಂತೆ ದೇಶಾದ್ಯಂತ ಸಾವಿನ ಸಂಖ್ಯೆ 21ಕ್ಕೇರಿದೆ.
ಎಚ್1ಎನ್1 ಮಹಾಮಾರಿಗೆ ಗುರುವಾರ ಬೆಳಿಗ್ಗೆ ಹನ್ನೊಂದು ತಿಂಗಳ ಹಸುಳೆ ಹಾಗೂ 75ರ ಹರೆಯದ ಮಹಿಳೆಯೊಬ್ಬರು ಆಹುತಿಯಾಗಿದ್ದರು. ಇಂದು ಮಧ್ಯಾಹ್ನ ಅರ್ಚನಾ ಶ್ರೀ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ಟಿವಿ ಚಾನೆಲ್ ವರದಿ ತಿಳಿಸಿದೆ. ಈ ಘಟನೆಗೂ ಮುನ್ನ ಬುಧವಾರ ಬೆಂಗಳೂರಿನ ಖಾಸಗಿ ಶಾಲೆಯ ಶಿಕ್ಷಕಿ ರೂಪಾ ಎಚ್1ಎನ್1 ವೈರಸ್‌ಗೆ ಬಲಿಯಾಗಿದ್ದರು.
ಏತನ್ಮಧ್ಯೆ ದೇಶಾದ್ಯಂತ ಎಚ್1ಎನ್1 ಜನರಲ್ಲಿ ಭೀತಿ ಮೂಡಿಸಿದ್ದರೆ ಮತ್ತೊಂದೆಡೆ ಪ್ರಧಾನಿ ಮನಮೋಹನ್ ಸಿಂಗ್ ಅವರು, ಸೋಂಕು ಹರಡುವ ಕುರಿತು ಆತಂಕ ಸೃಷ್ಟಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕೇಂದ್ರ ಆರೋಗ್ಯ ಸಚಿವರು ಸಂಪುಟ ಸಭೆಯಲ್ಲಿ ಎಚ್1ಎನ್1 ಪರಿಸ್ಥಿತಿ ಕುರಿತು ವಿವರ ನೀಡಿದ ನಂತರ ಪ್ರಧಾನಿ ಸಿಂಗ್ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಹಂದಿಜ್ವರದ ಪರಿಸ್ಥಿತಿಯನ್ನು ಅವಲೋಕಿಸಿದ ಪ್ರಧಾನಿ, ಎಚ್1ಎನ್1 ಬಗ್ಗೆ ಆತಂಕ ಸೃಷ್ಟಿಸಬೇಡಿ ಮತ್ತು ಜನರಲ್ಲಿ ಮತ್ತೆ ವಿಶ್ವಾಸ ಮೂಡಿಸುವ ಕೆಲಸ ಮಾಡಿ ಎಂದು ಆರೋಗ್ಯ ಸಚಿವ ಗುಲಾಂ ನಬಿಗೆ ಸೂಚಿಸಿದ್ದಾರೆ.
ದೇಶಕ್ಕೆ ಇದೊಂದು ಪ್ರಮುಖ ಸಮಸ್ಯೆಯಾಗಿದ್ದು, ಅದನ್ನು ಸರ್ಕಾರ ಸಮರ್ಥವಾಗಿ ಎದುರಿಸಲು ಎಲ್ಲಾ ಕ್ರಮ ಕೈಗೊಂಡಿದೆ ಎಂದು ಈ ಸಂದರ್ಭದಲ್ಲಿ ಸಿಂಗ್ ಹೇಳಿದರು.