ಇಬ್ಬರು ಹಿರಿಯ ಮಹಿಳೆಯರು, ಒಬ್ಬ ಏಡ್ಸ್ ರೋಗಿ ಸೇರಿದಂತೆ ಪುಣೆಯಲ್ಲಿ ಸ್ವೈನ್‌ಫ್ಲೂಗಾಗಿ ಆಹುತಿಯಾಗುವುದರೊಂದಿಗೆ ಗುರುವಾರ ಒಂದೇ ದಿನದಲ್ಲಿ ಪುಣೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದು, ಪುಣೆಯೊಂದರಲ್ಲೇ ಸತ್ತವರ ಸಂಖ್ಯೆ 15ಕ್ಕೇರಿದೆ. ಬೆಂಗಳೂರಿನ ರೂಪಾ ಎಂಬ ಶಿಕ್ಷಕಿಯ ಸಾವು ಸೇರಿದಂತೆ ರಾಷ್ಟ್ರದಲ್ಲಿ ಈ ಮಹಾಮಹಾರಿಗೆ ಒಟ್ಟು 23 ಮಂದಿ ಬಲಿಯಾದರು.
ಯೆರವಾಡದ ಗಣೇಶ್ ನಗರದ 70 ವರ್ಷದ ಪಾರುಬಾಯಿ ಶಿಂಧೆ ಅವರನ್ನು ನಾಲ್ಕು ದಿನಗಳ ಹಿಂದೆ ವಿಪರೀತ ಜ್ವರ ಹಾಗೂ ಹಂದಿಜ್ವರದ ಇತರ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಅವರು ಗುರುವಾರ ತಡರಾತ್ರಿ ಸಾವನ್ನಪ್ಪಿದರು ಎಂಬುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
ಇನ್ನೊರ್ವ ಹಿರಿಯ ಮಹಿಳೆ ಭಾರತಿ ಗೋಯಲ್ ಅವರೂ ಕಳೆದ ನಾಲ್ಕು ದಿನದಿಂದ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಅಳವಡಿಸಲಾಗಿತ್ತಾದರೂ ಅವರು ಸಾವನ್ನಪ್ಪಿದ್ದಾರೆ ಅವರಿಗೂ ಹಂದಿಜ್ವರದಿಂದ ಸೋಂಕಿತ್ತು ಎಂಬುದಾಗಿ ಶಂಕಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
37ರ ಹರೆಯದ ಅರ್ಚನಾ ಕೋಲೆ ಅವರನ್ನು ಆಗಸ್ಟ್ 10ರಂದು ಸಸೂನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಿಗೂ ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಇವರು ಗುರುವಾರ ಅಪರಾಹ್ನ ಸಾವನ್ನಪ್ಪಿದ್ದರು.ಗುರುವಾರ ಮುಂಜಾನೆ ಹನ್ನೊಂದು ತಿಂಗಳ ಹಸುಳೆ ಸ್ವಾಭಿಮಾನ್ ಕಾಂಬ್ಳೆಯನ್ನೂ ಈ ರೋಗ ಆಹುತಿ ತೆಗೆದುಕೊಂಡಿತ್ತು. ಈ ಮಗು ಹಂದಿಜ್ವರಕ್ಕೆ ಬಲಿಯಾದ ಅತ್ಯಂತ ಕಿರಿಯ.
ಎಚ್ಐವಿ ಸೋಂಕು ಪೀಡಿತ ಪ್ರಭಾಕರ್ ವಾರಿಯಗರ್(44) ಅವರು ಗುರುವಾರ ಸಾಂಯಕಾಲ ಸಸೂನ್ ಆಸ್ಪತ್ರೆಗೆ ದಾಖಲಾದ ಗಂಟೆಯೊಳಗೆ ಕೊನೆಯುಸಿಳೆದರು.
ಬೆಂಗಳೂರಿನ ರೂಪಾ ಎಂಬ 26ರ ಹರೆಯದ ಶಿಕ್ಷಕಿ ಗುರುವಾರ ಹಂದಿಜ್ವರಕ್ಕೆ ಬಲಿಯಾಗಿದ್ದು ಇದು ಕರ್ನಾಟಕದಲ್ಲಿ ಹಂದಿಜ್ವರದಿಂದ ಸಂಭವಿಸಿದ ಮೊದಲ ಸಾವಾಗಿದೆ.