ರಾಜಸ್ಥಾನ ವಿಪಕ್ಷ ನಾಯಕಿಯಾಗಿರುವ ವಸುಂಧರಾ ರಾಜೆ ವಿರುದ್ಧ ಪಕ್ಷದೊಳಗೆ ಎದ್ದಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅವರಿಗೆ ಬೆಂಬಲ ಸೂಚಿಸಲು 57 ನಿಷ್ಠಾವಂತ ಶಾಸಕರು ದೆಹಲಿಗೆ ದೌಡಾಯಿಸಿದ್ದಾರೆ. ವಸುಂಧಾರ ಅವರಿಗೆ ಸ್ಥಾನತೊರೆಯುವಂತೆ ಪಕ್ಷದ ಹೈಕಮಾಂಡ್ ತಾಕೀತು ಮಾಡಿರುವ ಹಿನ್ನೆಲೆಯಲ್ಲಿ, ಅವರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಹೈಕಮಾಂಡ್ ಎದುರು ಬಲಪ್ರದರ್ಶನಕ್ಕಾಗಿ ರಾಜೆ ನಿಷ್ಠರು ದೆಹಲಿಗೆ ತಲುಪಿದ್ದಾರೆ.
ಪಕ್ಷದೊಳಗೆ ಮಾಜಿಮುಖ್ಯಮಂತ್ರಿಯ ವಿರುದ್ಧ ಅಸಮಾಧಾನ ಹೆಚ್ಚುತ್ತಿದ್ದು, ಸ್ಥಾನತೊರೆಯುವಂತೆ ಪಕ್ಷದ ಹೈಕಮಾಂಡ್ ಅವರಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ನಿಷ್ಠಾವಂತ ಶಾಸಕರು ಗುರುವಾರ ವಸುಂಧರಾ ನಿವಾಸದಲ್ಲಿ ಜಮಾಯಿಸಿದ್ದು ಸಭೆ ನಡೆಸಿ ಅನೌಪಚಾರಿಕ ಚರ್ಚೆ ನಡೆಸಿದ ಬಳಿಕ ಗುರುವಾರ ರಾತ್ರಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಇಲ್ಲಿ ನಡೆದ ಸಭೆಯೊಂದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅರುಣ್ ಚತುರ್ವೇದಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರೊಂದಿಗೆ ನಡೆದ ಮಾತಿನ ಚಕಮಕಿಯ ಬಳಿಕ ಪಕ್ಷದೊಳಗೆ ಹೊಗೆಯಾಡುತ್ತಿದ್ದ ಅಸಮಾಧಾನ ಭುಗಿಲೆದ್ದಿದೆ.
ಇದಾದ ಬಳಿಕ ಚತುರ್ವೇದಿಯವರ ಮನೋಭಾವಕ್ಕೆ ಅಸಂತೃಪ್ತಿ ವ್ಯಕ್ತಪಡಿಸಿ ವಸುಂಧರಾ ರಾಜೆ ನಿಷ್ಠರಾಗಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಜೀನಾಮೆ ನೀಡಿದ್ದರು.
ಇದೀಗ ಅವರ ನಿಷ್ಠರಾಗಿರುವ 57 ಶಾಸಕರು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜ್‌ನಾಥ್ ಸಿಂಗ್ ಅವರ ಬಳಿ ತೆರಳಿ ತಮ್ಮ ಬೆಂಬಲ ಸೂಚಿಸಿದ್ದಾರೆ.