ಉತ್ತರ ಕೇರಳದ ಜಿಲ್ಲೆಗಳನ್ನು ಸೇರಿಸಿ ಪ್ರತ್ಯೇಕ ಮುಸ್ಲಿಂ ರಾಜ್ಯವನ್ನು ಸ್ಥಾಪಿಸದೇ ಇದ್ದರೆ, ರಾಜ್ಯದೆಲ್ಲೆಡೆ ಅಲ್ಲಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿರುವ ಇಮೇಲ್ ಮೂಲವನ್ನು ಕೇರಳದ ಸೈಬರ್ ಸೆಲ್ ಪೊಲೀಸರು ಪತ್ತೆ ಹಚ್ಚಿದ್ದು ಇದರ ಮೂಲ ಯುನೈಟೆಡ್ ಅರಬ್ ಎಮಿರೇಟ್ಸ್ ಎಂದು ಹೇಳಿದೆ.
ಕೇರಳದ ಕೆಲವು ಮಾಧ್ಯಮ ಕಚೇರಿಗಳು ಗುರವಾರ ಈ ಇಮೇಲ್ ಸ್ವೀಕರಿಸಿವೆ ಎಂದು ಐಜಿಪಿ ಟಾಮಿನ್ ಜೆ ತಚೆಂಕೆರೆ ಅವರು ಶುಕ್ರವಾರ ವರದಿಗಾರರಿಗೆ ತಿಳಿಸಿದ್ದಾರೆ.
"ನಾವು ತಕ್ಷಣವೇ ಕಾರ್ಯಾರಂಭಿಸಿದ್ದು, ಈ ಇಮೇಲ್ ಮೂಲವು ಯುಎಇ ಮೂಲದ ಎಟಿಸಲಾಟ್ ಎಂಬುದಾಗಿ ಪತ್ತೆಹಚ್ಚಿದ್ದೇವೆ. ಕಂಪ್ಯೂಟರಿನ ಐಪಿಯನ್ನು ಪತ್ತೆ ಹಚ್ಚಲು ಪ್ರಥಮ ಮಾಹಿತಿ ವರದಿಯ ಅವಶ್ಯಕತೆ ಇರುವ ಕಾರಣ ಕಣ್ಣೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ" ಎಂದು ಅವರು ತಿಳಿಸಿದ್ದಾರೆ
ಜಾಕೀರ್ ಹುಸೇನ್ ಎಂಬಾತ ಈ ಇಮೇಲ್ ಕಳುಹಿಸಿದ್ದು, ಹೊಸದಾಗಿ ಹುಟ್ಟುಹಾಕಿರುವ ಮಲಬಾರ್ ಮುಜಾಹಿದ್ ಎಂಬ ಸಂಘಟನೆಯ ಮುಖ್ಯಸ್ಥ ತಾನು ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ಇದರ ಮುಖ್ಯಕಚೇರಿ ಪಾಕಿಸ್ತಾನದಲ್ಲಿದ್ದು ಐಎಸ್ಐ ಹಾಗೂ ಲಷ್ಕರೆ-ಇ-ತೊಯ್ಬಾದ ಬೆಂಬಲ ಹೊಂದಿದೆ ಎಂದೂ ಆತ ಹೇಳಿದ್ದಾನೆ.
"ಪ್ರತ್ಯೇಕ ಮುಸ್ಲಿಂ ರಾಜ್ಯದ ಬೇಡಿಕೆಯನ್ನು ಪೂರೈಸದೇ ಇದ್ದರೆ, ರಾಜ್ಯಾದ್ಯಂತ ಬಾಂಬ್‌ಗಳು ಸ್ಫೋಟಿಸಲಿವೆ ಮತ್ತು ಇದಕ್ಕಾಗಿ ರಾಜ್ಯಕ್ಕೆ ಇದೀಗಾಗಲೇ ಏಳು ಕೆಜಿ ಆರ್‌ಡಿಎಕ್ಸ್ ಸರಬರಾಜು ಮಾಡಲಾಗಿದೆ. ಇದಕ್ಕೆ ಸ್ಯಾಂಪಲ್ ಎಂಬಂತೆ ಪಾಕಿಸ್ತಾನದ ಸ್ವಾತಂತ್ರ್ಯದಿನಾಚರಣೆಯ ಅಂಗವಾಗಿ ಮೊದಲ ಬಾಂಬನ್ನು ಶುಕ್ರವಾರ ಸ್ಫೋಟಿಸಲಾಗುವುದು" ಎಂದು ಇಮೇಲ್‌ನಲ್ಲಿ ಹೇಳಲಾಗಿದೆ ಎಂದು ಐಜಿಪಿ ತಿಳಿಸಿದ್ದಾರೆ.
ಇಮೇಲ್ ಬೆದರಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಎಲ್ಲಾ ಜಿಲ್ಲಾ ಮುಖ್ಯಕಚೇರಿಗಳಿಗೆ ಕಟ್ಟೆಚ್ಚರ ವಹಿಸುವಂತೆ ಹೇಳಲಾಗಿದೆ.