ಕಳೆದ ನವೆಂಬರ್‌ನಲ್ಲಿ ಮುಂಬೈ ನಗರಿಯಲ್ಲಿ ವಿಧ್ವಂಸಕ ಕೃತ್ಯ ನಡೆಸಿರುವ ಉಗ್ರರು ಬಳಸಿರುವ ಐದು ಮೊಬೈಲ್ ಫೋನ್‌ಗಳು ಚೀನಾದಲ್ಲಿ ತಯಾರಿಸಲಾಗಿದ್ದು ಪಾಕಿಸ್ತಾನಕ್ಕೆ ಕಳುಹಿಸಲ್ಪಟ್ಟಿತ್ತು ಎಂಬುದಾಗಿ ಸಾಕ್ಷಿಯೊಬ್ಬರು ಶುಕ್ರವಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಅಮೆರಿಕದಲ್ಲಿ ನೋಕಿಯಾ ಕಂಪೆನಿಯ ಎನ್‌ಫೋರ್ಸ್‌ಮೆಂಟ್ ಅಧಿಕಾರಿಯಾಗಿರುವ ವ್ಯಕ್ತಿಯು ಅಮೆರಿಕ ಎಫ್‌ಬಿಐ ಕಚೇರಿ ಮೂಲಕ ನಡೆಸಲಾಗಿರುವ ವೀಡಿಯೋಕಾನ್ಫರೆನ್ಸ್ ವಿಚಾರಣೆ ವೇಳೆಗೆ ಮುಂಬೈ ದಾಳಿಯ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ದಾಳಿಯ ವೇಳೆ ಸಾವನ್ನಪ್ಪಿರುವ ಒಂಬತ್ತು ಉಗ್ರರಿಂದ ಐದು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳನ್ನು ಎಲ್ಲಿಂದ ಖರೀದಿಸಲಾಗಿದೆ ಎಂಬುದನ್ನು ತನಿಖೆ ಮಾಡಲಾಗಿತ್ತು.
ಉಗ್ರರಿಗೆ ಹಾಗೂ ಪಾಕಿಸ್ತಾನಕ್ಕೆ ಸಂಪರ್ಕ ಇರುವುದನ್ನು ದೃಢ ಪಡಿಸಿದವರಲ್ಲಿ ಇವರು ಮೂರನೆ ಸಾಕ್ಷಿಯಾಗಿದ್ದಾರೆ. ಈ ಹಿಂದೆ ಎಫ್‍ಬಿಐನ ಫಾರೆನ್ಸಿಕ್ ತಜ್ಞರು ಸಾಕ್ಷಿ ನೀಡಿದ್ದ ವೇಳೆ ಉಗ್ರರು ಕರಾಚಿಯಿಂದ ಮುಂಬೈಗೆ ಬರಲು ಜಿಪಿಎಸ್ ಬಳಸಿದ್ದರು ಮತ್ತು ಇದರ ನಕಾಶೆಯ ದತ್ತಾಂಶಗಳು ಅವರು ಕರಾಚಿಯಿಂದ ಮುಂಬೈಗೆ ಆಗಮಿಸಿರುವ ವಿವರಗಳನ್ನು ನೀಡುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ಜಪಾನ್‌ನ ಯಮಹಾ ಕಂಪೆನಿಯ ಅಧಿಕಾರಿ ನ್ಯಾಯಾಲಯಕ್ಕೆ ಸಾಕ್ಷ್ಯ ನೀಡಿ, ಉಗ್ರರು ಬಳಸಿದ್ದ ಬೋಟ್ ಎಂಜಿನನ್ನು ಜಪಾನ್ ಪಾಕಿಸ್ತಾನಕ್ಕೆ ಮಾರಾಟ ಮಾಡಿತ್ತು ಎಂದು ಹೇಳಿದ್ದರು.