ಮಾರಣಾಂತಿಕ ಸಾಂಕ್ರಾಮಿಕ ಹಂದಿ ಜ್ವರವು ಈಶಾನ್ಯರಾಜ್ಯಗಳತ್ತ ಹರಡುತ್ತಿದ್ದು, ಶನಿವಾರ ಮಿಜೊರಾಂ ಮತ್ತು ಅಸ್ಸಾಂನಲ್ಲಿ ಹಂದಿ ಜ್ವರದ ಹೊಸ ಪ್ರಕರಣಗಳು ವರದಿಯಾಗಿವೆ. ಏತನ್ಮಧ್ಯೆ, ಕರ್ನಾಟಕದಲ್ಲಿ ಹಂದಿ ಜ್ವರದ ಪ್ರಕರಣಗಳಲ್ಲಿ ಮತ್ತೆರಡು ಸಾವಿನಿಂದ ದೇಶಾದ್ಯಂತ ಹಂದಿ ಜ್ವರದ ಸೋಂಕಿಗೆ ಸತ್ತವರ ಸಂಖ್ಯೆ 25ಕ್ಕೇರಿದ್ದು, ಕಾಯಿಲೆ ಹರಡದಂತೆ ತಡೆಯಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಭರವಸೆ ನೀಡಿದ್ದಾರೆ.
ಶನಿವಾರ 165 ಜನರ ತಪಾಸಣೆಯಲ್ಲಿ ವೈರಸ್ ಸೋಂಕಿರುವುದು ಕಂಡುಬಂದಿದ್ದು, ಸೋಂಕಿತ ಜನರ ಸಂಖ್ಯೆಯು 1556ಕ್ಕೇರಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೆ ಒಟ್ಟು 7752 ಜನರನ್ನು ಎಚ್1ಎನ್1 ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ 1556 ಮಂದಿಗೆ ಹಂದಿ ಜ್ವರದ ಸೋಂಕು ಅಂಟಿರುವುದು ದೃಢಪಟ್ಟಿದೆ. ಅವರಲ್ಲಿ 689 ಮಂದಿಯನ್ನು ಸೂಕ್ತ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆಯೆಂದು ಅಧಿಕೃತ ಹೇಳಿಕೆ ತಿಳಿಸಿದೆ. ದೆಹಲಿಯಲ್ಲಿ ಒಟ್ಟು 165 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಮಹಾರಾಷ್ಟ್ರದಿಂದ 97 ಪ್ರಕರಣಗಳು ವರದಿಯಾಗಿದೆ. ಆದರೆ ಅವರಲ್ಲಿ ಯಾರೂ ವಿದೇಶ ಪ್ರವಾಸ ಮಾಡಿದ ಹಿನ್ನೆಲೆಯಿರಲಿಲ್ಲವೆಂದು ಹೇಳಿಕೆ ತಿಳಿಸಿದೆ.
ಪುಣೆ ನಗರ ಎಚ್1ಎನ್1 ಸೋಂಕಿನಿಂದ ತೀವ್ರವಾಗಿ ಬಾಧಿಸುತ್ತಿದ್ದು, 69 ಹೊಸ ಪ್ರಕರಣಗಳು ವರದಿಯಾಗಿವೆ.ಹಂದಿ ಜ್ವರ ಹಾವಳಿ ನಿಭಾಯಿಸಲು ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ ಹೆಚ್ಚು ವೈದ್ಯರು ಮತ್ತು ದಾದಿಯರ ಅಗತ್ಯ ಕಂಡುಬಂದಿದೆಯೆಂದು ಪುಣೆ ಸಚಿವ ಅಜಿತ್ ಪವಾರ್ ತಿಳಿಸಿದ್ದಾರೆ.