ಪಾಕಿಸ್ತಾನದ ಸಂಸ್ಥಾಪಕ ಮೊಹಮದ್ ಅಲಿ ಜಿನ್ನಾ ಮಹಾನ್ ಭಾರತೀಯ ಎಂದು ಬಿಜೆಪಿಯ ಹಿರಿಯ ನಾಯಕ ಜಸ್ವಂತ್ ಸಿಂಗ್ ಹೊಗಳಿ ಅಟ್ಟಕ್ಕೇರಿಸಿದ್ದಾರೆ. ಜಿನ್ನಾ ವ್ಯಕ್ತಿತ್ವದಿಂದ ತಾವು ಆಕರ್ಷಿತರಾಗಿದ್ದಾಗಿ ಜಸ್ವಂತ್ ಸಿಂಗ್ ಹೇಳಿದ್ದಾರೆ. ಸಿಎನ್‌ಎನ್-ಐಬಿಎನ್‌ನ ಡೆವಿಲ್ಸ್ ಅಡ್ವೊಕೇಟ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಿಂಗ್, ಪಾಕಿಸ್ತಾನದ ಪಿತಾಮಹನ ಗುಣಗಾನ ಮಾಡಿದರಲ್ಲದೇ ಭಾರತದ ಪ್ರಥಮ ಪ್ರಧಾನಮಂತ್ರಿ ನೆಹರೂ ಕುರಿತ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಜಿನ್ನಾರನ್ನು ಸೈತಾನ ಸ್ವರೂಪಿಯಾಗಿಸುವ ಜನಪ್ರಿಯ ಭಾವನೆ ಕುರಿತು ಪ್ರಶ್ನಿಸಿದಾಗ ಅದನ್ನು ತಾವು ಒಪ್ಪಿಕೊಳ್ಳುವುದಿಲ್ಲವೆಂದು ಹೇಳಿದರು. ಜಿನ್ನಾ ವ್ಯಕ್ತಿತ್ವದಿಂದ ತಾವು ಆಕರ್ಷಿತರಾಗಿದ್ದು, ಅದರ ಫಲವಾಗಿ ಪುಸ್ತಕವನ್ನು ರಚಿಸಿದ್ದೇನೆ. ತಾವು ಜಿನ್ನಾ ವ್ಯಕ್ತಿತ್ವದಿಂದ ಆಕರ್ಷಿತರಾಗದಿದ್ದರೆ ಪುಸ್ತಕ ಬರೆಯುತ್ತಿರಲಿಲ್ಲ. ಅವರದ್ದು ಮಹಾನ್ ಸಂಕಲ್ಪ ಮತ್ತು ಗುಣಗಳ ಜಟಿಲ ವ್ಯಕ್ತಿತ್ವವೆಂದು ಅವರು ನುಡಿದಿದ್ದಾರೆ. ಪಾಕಿಸ್ತಾನದ ಸೃಷ್ಟಿಗೆ ಜಿನ್ನಾರಿಗೆ ಕ್ರೆಡಿಟ್ ನೀಡಿದ ಜಸ್ವಂತ್, ಸ್ವಾತಂತ್ರ್ಯಪೂರ್ವ ದಿನಗಳಲ್ಲಿ ಕಾಂಗ್ರೆಸ್ ಏಕಸ್ವಾಮ್ಯಕ್ಕೆ ಸವಾಲು ಹಾಕಿದ ಏಕೈಕ ವ್ಯಕ್ತಿ ಜಿನ್ನಾ ಎಂದು ಅವರು ಹೊಗಳಿದ್ದಾರೆ.
ಜಿನ್ನಾ ಏಕಾಂಗಿಯಾಗಿ ಕಾಂಗ್ರೆಸ್ ಪಕ್ಷದ ಪ್ರಾಬಲ್ಯದ ವಿರುದ್ಧ ಮತ್ತು ತಮ್ಮನ್ನು ಇಷ್ಟಪಡದ ಬ್ರಿಟಿಷರ ವಿರುದ್ಧ ಸಿಡಿದೆದ್ದರು. ಗಾಂಧಿ ಜಿನ್ನಾ ಅವರನ್ನು ಮಹಾನ್ ಭಾರತೀಯನೆಂದು ಕರೆದಿದ್ದಾರೆ. ಅದನ್ನು ನಾವೇಕೆ ಮಾನ್ಯ ಮಾಡಬಾರೆಂದು ಸಿಂಗ್ ಪ್ರಶ್ನಿಸಿದ್ದಾರೆ. ಜಿನ್ನಾ ಅವರ ಗುಣಗಳು ಮತ್ತು ಅವರ ಸ್ವಯಂಕೃತ ವ್ಯಕ್ತಿತ್ವದ ಬಗ್ಗೆ ಮಾರುಹೋಗಿದ್ದಾಗಿ ಸಿಂಗ್ ಹೇಳಿದ್ದಾರೆ. ಅವರ ವ್ಯಕ್ತಿತ್ವದ ಕೆಲವು ಅಂಶಗಳನ್ನು ತಾವು ಮೆಚ್ಚುವುದಾಗಿ ಅವರು ಹೇಳಿದರು. ಜಿನ್ನಾ ಅವರು ದೃಢಸಂಕಲ್ಪ ಮತ್ತು ಇಚ್ಛಾಶಕ್ತಿಯಿಂದ ಮೇಲೆ ಬಂದವರು. ಮಹಾತ್ಮ ಗಾಂಧಿ ದಿವಾನರ ಪುತ್ರ. ನೆಹರೂ ಮತ್ತಿತರರು ಜನ್ಮತಃ ಸಂಪತ್ತು ಮತ್ತು ಅಧಿಕಾರವನ್ನು ಹೊಂದಿದವರು.
ಆದರೆ ಜಿನ್ನಾ ಸ್ವಯಂಶಕ್ತಿಯಿಂದ ಅಧಿಕಾರವನ್ನು ಸಂಪಾದಿಸಿದ್ದಾಗಿ ಸಿಂಗ್ ಹೇಳಿದರು. ಅವರು ಕಡುಬಡವರಾಗಿದ್ದು, ಕೆಲಸದ ಸ್ಥಳಕ್ಕೆ ನಡೆದುಕೊಂಡೇ ಹೋಗುತ್ತಿದ್ದರೆಂದು ಸಿಂಗ್ ಜಿನ್ನಾ ಗುಣಗಾನ ಮಾಡಿದ್ದಾರೆ.
ಇನ್ನೊಂದು ಚಕಿತಕಾರಿ ಹೇಳಿಕೆಯಲ್ಲಿ ಜಿನ್ನಾ ಹಿಂದೂಗಳನ್ನು ದ್ವೇಷಿಸುತ್ತಿದ್ದರೆಂಬ ಅನೇಕ ಮಂದಿಯ ಅಭಿಪ್ರಾಯ ಸರಿಯಲ್ಲವೆಂದು ಅವರು ನುಡಿದರು. ಅವರು ಬ್ರಿಟಿಷರಿಂದ ಸ್ವತಂತ್ರ ಭಾರತಕ್ಕಾಗಿ ಹೋರಾಟ ಮಾಡಿದರು. ಅದರ ಜತೆಗೆ ನಿರಂತರವಾಗಿ ಭಾರತದ ಮುಸ್ಲಿಮರ ಹಿತಾಸಕ್ತಿಗೆ ಶ್ರಮಿಸಿದರು. 1916ರಲ್ಲಿ ಹಿಂದು-ಮುಸ್ಲಿಂ ಏಕತೆ ಸಾಧಿಸಿದ ಲಕ್ನೊ ಒಪ್ಪಂದವು ಅವರ ಸಾಧನೆಯೆಂದು ನುಡಿದರು. ಜಿನ್ನಾರನ್ನು ಭಾರತೀಯ ನಾಯಕರು ತಪ್ಪಾಗಿ ಭಾವಿಸಿದರಲ್ಲದೇ ಅವರ ಪೈಶಾಚಿಕತನದ ಬಗ್ಗೆ ಬಿಂಬಿಸಿದರು. ಸಿಂಗ್ ಅವರ ಪ್ರಕಾರ, ಜಿನ್ನಾರನ್ನು ಪಿಶಾಚಿಯಂತೆ ಬಿಂಬಿಸಿದ್ದು, ಭಾರತ-ಪಾಕಿಸ್ತಾನದ ವಿಭಜನೆಯ ಫಲವೆಂದು ಹೇಳಿದರು.