ತಾವು ಬಿಜೆಪಿಯನ್ನು ಬಿಡುವ ಇಚ್ಛೆ ಹೊಂದಿಲ್ಲ ಮತ್ತು ಮುಖಂಡರಿಗೆ ವಿರುದ್ಧವಾಗಿ ಮಾತನಾಡಿಲ್ಲವೆಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಭಾನುವಾರ ತಿಳಿಸಿದ್ದಾರೆ. ಆದರೆ ರಾಜ್ಯ ಘಟಕದ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಅವರು ಸ್ಪಷ್ಟ ಉತ್ತರವನ್ನು ನೀಡಲಿಲ್ಲ.'ತಾವು ಬಿಜೆಪಿಯನ್ನು ಬಿಡುವ ಬಗ್ಗೆ ಯೋಚಿಸಿಯೇ ಇಲ್ಲ.
ಪಕ್ಷದ ಹಿತಾಸಕ್ತಿಗಳನ್ನು ಕಾಪಾಡಿದ ತಮ್ಮ ತಾಯಿ ಜೀವನಪೂರ್ತಿ ಕಳೆದರು. ತಾವು ಕೂಡ ಬಿಜೆಪಿ ಮತ್ತು ಅದರ ಮುಖಂಡರಿಗೆ ವಿರುದ್ಧವಾಗಿ ಯಾವುದೇ ಮಾತನಾಡಿಲ್ಲ. ತಾವು ಹೊಸ ಪಕ್ಷ ರಚಿಸುವುದೂ ಇಲ್ಲವೆಂದು' ರಾಜೆ ತಿಳಿಸಿದ್ದಾರೆ.ಆದರೆ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಅಧ್ಯಕ್ಷ ರಾಜನಾಥ್ ಸಿಂಗ್ ಸೂಚನೆಯನ್ನು ಪಾಲಿಸಲು ರಾಜೆ ನಿರಾಕರಿಸಿದ್ದಾರೆ.
ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ತಾವೊಬ್ಬರೇ ಹೊಣೆಯಲ್ಲವೆಂದೂ ಅವರು ಹೇಳಿದರು. ಆದರೆ ರಾಜೆ ರಾಜೀನಾಮೆ ನೀಡಬೇಕೆಂದು ಯಾವುದೇ ಅಧಿಕೃತ ಸೂಚನೆ ಬಂದಿಲ್ಲವೆಂದು ಶಾಸಕ ಅಹುಜಾ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ತಿಳಿಸಿದೆ. ರಾಜೆ ಅವರಿಗೆ ಬೆಂಬಲವಾಗಿ ಅವರ ಬೆನ್ನಹಿಂದೆ ಬಿಜೆಪಿಯ 57 ಶಾಸಕರ ದಂಡು ನಿಂತಿರುವುದು ರಾಜೆ ಅವರಿಗೆ ಬಲತಂದಿದೆ. ಬಿಜೆಪಿ ಶಾಸಕರು ಪಕ್ಷದ ಹಿರಿಯ ನಾಯಕ ಅಡ್ವಾಣಿ ಅವರ ನಿವಾಸಕ್ಕೆ ತೆರಳಿ ಮಾಜಿ ಮುಖ್ಯಮಂತ್ರಿಗೆ ತಾವು ಬೆಂಬಲವಾಗಿ ನಿಲ್ಲುವುದಾಗಿ ತಿಳಿಸಿದ್ದರು.