ಇಲ್ಲಿನ ಸಾಸನ್ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ 36ರ ಹರೆಯದ ಮಹಿಳೆಯೊಬ್ಬರು ಎಚ್1ಎನ್1 ಸೋಂಕಿಗೆ ಬಲಿಯಾಗಿದ್ದು, ದೇಶದಾದ್ಯಂತ ಸಾವನ್ನಪ್ಪಿದವರ ಸಂಖ್ಯೆ 28ಕ್ಕೇರಿದೆ.
ಆಗಸ್ಟ್ 13ರಂದು ಹಂದಿಜ್ವರ ಲಕ್ಷಣಗಳನ್ನು ಹೊಂದಿದ್ದ ಬಿನಾ ಗೊಂಜಾಲ್ವೆಸ್ ಎಂಬ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮಹಿಳೆಯ ಸಾವಿನೊಂದಿಗೆ ಪುಣೆಯಲ್ಲಿ ಮಹಾಮಾರಿಗೆ 13ನೇ ಬಲಿಯಾದಂತಾಗಿದೆ.
ಕರ್ನಾಟಕದಲ್ಲಿ ಐದು ಸಾವು.. ಆಗಸ್ಟ್ 12ರಂದು ಕೆಮ್ಮು, ಶೀತ ಮತ್ತು ಮೈ-ಕೈ ನೋವೆಂದು ಸೈಂಟ್ ಜೋಸೆಫ್ ಆಸ್ಪತ್ರೆಗೆ ದಾಖಲಾಗಿದ್ದ ಬೆಂಗಳೂರಿನ ಮಲ್ಲೇಶ್ವರದ ಶಿಲ್ಪಾ ಹೆಗಡೆ (27) ಎಂಬ ಯುವತಿ ಶನಿವಾರ ನಡು ರಾತ್ರಿ ಮೃತರಾಗಿದ್ದಾರೆ.
ಮೂಡಬಿದಿರೆಯ ಬೆಳುವಾಯಿವರಾದ ಶಿಲ್ಪಾ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದರು. ಆಸ್ಪತ್ರೆಗೆ ದಾಖಲಾದ ಕೂಡಲೇ ಆಕೆಯ ಗಂಟಲು ಮಾದರಿಯನ್ನು ಆ.13ರಂದು ಪಡೆದುಕೊಂಡು ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿ ಬರುವ ಮೊದಲೇ ಆಕೆಗೆ ಟ್ಯಾಮಿಫ್ಲೂ ಮಾತ್ರೆಗಳನ್ನು ನೀಡಲಾಗಿದೆ. ಆಗಸ್ಟ್ 14ರಂದು ಆಕೆಗೆ ಎಚ್1ಎನ್1 ತಗುಲಿರುವುದು ದೃಢಪಟ್ಟಿತ್ತು.
ಬೆಂಗಳೂರಿನಲ್ಲಿ ಬಿಟಿಎಂ ಲೇಔಟ್ ನಿವಾಸಿ ರೂಪಾ (26), ವಿಜಯನಗರದ ಶಿವಣ್ಣ (55), ದೊಮ್ಮಸಂದ್ರದ ಮಂಜುನಾಥ್ (28) ಮತ್ತು ಅಶ್ವತ್ಥ ನಗರದ ಸಂಶಾದ್ ಬೇಗಂ (27) ಈ ಹಿಂದೆ ಹಂದಿ ಜ್ವರಕ್ಕೆ ಬಲಿಯಾದವರು.
152 ಹೊಸ ಪ್ರಕರಣಗಳು... ಭಾನುವಾರದ ವರದಿಯಲ್ಲಿ ದೇಶದಾದ್ಯಂತ 152 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸಂಖ್ಯೆ 1707ಕ್ಕೆರಿದೆ. ಇದರಲ್ಲಿ ಮುಂಬೈಯೊಂದರಿಂದಲೇ 60 ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಭಾನುವಾರ ಬೆಂಗಳೂರಿನಲ್ಲಿ 10, ಮಂಗಳೂರಿನಲ್ಲಿ 3, ದಾವಣಗೆರೆಯಲ್ಲಿ 2 ಹಾಗೂ ಬೆಳಗಾವಿ, ಹುಬ್ಬಳ್ಳಿಗಳಿಂದ ತಲಾ ಒಂದೊಂದು ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ.
ಉಳಿದಂತೆ ಪುಣೆಯಿಂದ 18, ದೆಹಲಿ ಮತ್ತು ಚೆನ್ನೈಯಿಂದ 11, ಕೊಯಂಬತ್ತೂರಿನಿಂದ ತಲಾ 10, ಔರಂಗಾಬಾದ್‌ನಿಂದ 9, ಎರ್ಣಾಕುಲಂನಿಂದ 3, ಅಕೋಲಾ, ಜಲ್ನಾಗಳಿಂದ ತಲಾ ಎರಡು ನೂತನ ಪ್ರಕರಣಗಳು ವರದಿಯಾಗಿವೆ.
ಅಹ್ಮದನಗರ್, ಸೋಲಾಪುರ, ಲಾತೂರ್, ನಾಗ್ಪುರ, ಜಲ್ಗಾನ್, ಧೂಲೆ, ಅಸ್ಸಾಂನ ದಿಬ್ರುಗರ್, ಶಿಮ್ಲಾಗಳಿಂದ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ ಎಂದು ಇಲಾಖೆ ತಿಳಿಸಿದೆ.