ರಾಷ್ಟ್ರದಲ್ಲಿ ಬರಗಾಲ ಮತ್ತು ಆಹಾರಪದಾರ್ಥಗಳ ಬೆಲೆ ಏರಿಕೆ ಪರಿಸ್ಥಿತಿ ಕುರಿತು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ನವದೆಹಲಿಯಲ್ಲಿ ಸೋಮವಾರ ಮಾತುಕತೆ ನಡೆಸಲಿದ್ದಾರೆ. ಸಭೆಯಲ್ಲಿ ಚರ್ಚಿತವಾಗುವ ಇನ್ನೊಂದು ಕಾರ್ಯಸೂಚಿ ಆಂತರಿಕ ಭದ್ರತೆ.
ರಾಷ್ಟ್ರದಲ್ಲಿ ಮಳೆಯ ಕೊರತೆ ಮತ್ತು ಬರದ ಸ್ಥಿತಿಯ ಬಗ್ಗೆ ಎಲ್ಲ ಮುಖ್ಯಮಂತ್ರಿಗಳ ಕಳವಳಗಳನ್ನು ಪ್ರಧಾನಮಂತ್ರಿ ಹಂಚಿಕೊಳ್ಳಲಿದ್ದು, ಈ ಕುರಿತು ದೃಢ ಕ್ರಮವನ್ನು ರೂಪಿಸಲು ಕೇಂದ್ರಕ್ಕೆ ನೆರವಾಗುವಂತೆ ಕೋರಲಿದ್ದಾರೆ. ಅನೇಕ ರಾಜ್ಯಗಳಲ್ಲಿ ಬರದ ಸ್ಥಿತಿ ಮಾತುಕತೆಯ ಮುಖ್ಯ ವಸ್ತುವಾಗಿದ್ದು, ಭಯೋತ್ಪಾದನೆ ಪ್ರಕರಣಗಳ ಹೆಚ್ಚಳ ಮತ್ತು ನಕ್ಸಲೀಯ ಬೆದರಿಕೆ ಅನೇಕ ರಾಜ್ಯಗಳಲ್ಲಿ ಕರಿನೆರಳು ಚಾಚಿದ್ದು, ಯುಪಿಎ ಸರ್ಕಾರಕ್ಕೆ ಆಂತರಿಕ ಭದ್ರತೆ ದೊಡ್ಡ ಸವಾಲಾಗಿರುವುದನ್ನು ಖಾತರಿಪಡಿಸಿದೆ.
ನಕ್ಸಲೀಯ ಚಟುವಟಿಕೆ ಕುರಿತು ಸಿಂಗ್ ಒಂದು ಗಂಟೆಯ ಕಾಲದ ಚರ್ಚೆ ನಡೆಸಲಿದ್ದು, ಪೊಲೀಸ್ ಸಿದ್ಧತೆ ಮತ್ತು ತರಬೇತಿ, ಪೊಲೀಸ್ ವ್ಯವಸ್ಥೆಯ ಆಧುನಿಕತೆ ಮತ್ತು ಗುಪ್ತಚರ ಮಾಹಿತಿ ಸಂಗ್ರಹದಲ್ಲಿ ಕೊರತೆ ಕೂಡ ಚರ್ಚೆಯಾಗಲಿದೆ. ಪ್ರಧಾನಮಂತ್ರಿ ವಿಶೇಷವಾಗಿ ಎರಡು ರಾಜ್ಯಗಳ ಬಗ್ಗೆ ಆತಂಕಿತರಾಗಿದ್ದಾರೆ. ಎರಡನೇ ಮಹಾಯುದ್ಧದ ಸಂದರ್ಭದ ಸಾಮಗ್ರಿಗಳನ್ನು ಇನ್ನೂ ಬಳಸುತ್ತಿರುವ ಉತ್ತರಪ್ರದೇಶ ಮತ್ತು ಯಾವುದೇ ಸಾಮಗ್ರಿ, ಶಸ್ತ್ರಾಸ್ತ್ರಗಳಿಲ್ಲದ ಅರುಣಾಚಲ ಪ್ರದೇಶ ಪ್ರಧಾನಿಗೆ ಚಿಂತೆಗೀಡುಮಾಡಿದೆ.
ಬರದ ಪರಿಸ್ಥಿತಿ ನಿಭಾಯಿಸುವ ಕುರಿತು ಸಭೆಯಲ್ಲಿ ಚರ್ಚೆಯಾಗಲಿದೆ. ಕಾಳಸಂತೆಕೋರರು ಅಕ್ರಮದಾಸ್ತಾನುಗಾರರ ವಿರುದ್ಧ ದಾಳಿಯಲ್ಲಿ ಕೇಂದ್ರದ ಜತೆ ಕೈಜೋಡಿಸುವಂತೆ ಪ್ರಧಾನಿ ರಾಜ್ಯಗಳಿಗೆ ಕೋರಲಿದ್ದಾರೆ. ಪಡಿತರ ವ್ಯವಸ್ಥೆ ಸಕ್ರಿಯಗೊಳಿಸುವಿಕೆ, ಬರ ನಿಭಾಯಿಸಲು ಸಂತ್ರಸ್ತ ರಾಜ್ಯಗಳಿಗೆ ಯೋಜನೆ, ರಬಿ ಬೆಳೆಗೆ ಸಿದ್ಧತೆ ಹೇಗೆ, ಬೀಜಗಳು, ಜಲ ಮತ್ತು ಡೀಸೆಲ್ ಅಗತ್ಯಗಳನ್ನು ಸೇರಿಸಲು ತುರ್ತು ಯೋಜನೆ ಕುರಿತು ವಿಚಾರವಿನಿಮಯ ನಡೆಸಲಿದ್ದಾರೆ.