ಕೋಲ್ಕತಾ: ಪಶ್ಚಿಮಬಂಗಾಳದ ಶಾಲೆಯೊಂದರಲ್ಲಿ ತಾಯಿಮತ್ತು ಮಗ ಒಂದೇ ತರಗತಿಯಲ್ಲಿ ಕುಳಿತುಕೊಳ್ಳುತ್ತಾರೆ!
ಪಶ್ಛಿಮ ಬಂಗಾಳದ ಉತ್ತರ 24 ಪರಗಣದ ದಂಡಿರ್‌ಹಾತ್ ನಾಗೇಂದ್ರ ಕುಮಾರ್ ಹೈಯರ್ ಸೆಕಂಡರಿ ಸ್ಕೂಲ್‌ನ ಹನ್ನೊಂದನೆ ತರಗತಿಯಲ್ಲಿ ತಾಯಿ ಅನಿಮಾ ದಾಸ್(35) ಹಾಗೂ ಮಗ ಪಾಲಾಶ್ ಅವರುಗಳು ವಿದ್ಯಾರ್ಥಿಗಳು.
ಈ ಅಮ್ಮ ಮತ್ತು ಮಗ ಒಂದೇ ಕ್ಲಾಸು ಮತ್ತು ಇವರು ತೆಗೆದುಕೊಂಡಿರುವ ವಿಷಯ ಕೂಡ ಒಂದೇ ಆಗಿದೆ. ಇಬ್ಬರೂ ಸಹ ಸಂಸ್ಕೃತ, ಇತಿಹಾಸ, ತತ್ವಶಾಸ್ತ್ರ ಮತ್ತು ರಾಜಕೀಯ ಶಾಸ್ತ್ರ ಆಗಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ದೀಪಕ್ ರಂಜನ್ ಮಂಡಲ್ ಹೇಳಿದ್ದಾರೆ.
"ತನ್ನ ತಾಯಿ ಒಂಬತ್ತನೆ ತರಗತಿಯಲ್ಲಿ ಶಾಲೆ ಬಿಟ್ಟಿದ್ದರು. ಅವರಿಗೆ ವಿವಾಹವಾದ ಹಿನ್ನೆಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಸ್ಥಗಿತಗೊಳಿಸಿದ್ದರು" ಎಂಬುದಾಗಿ ಪಾಲಾಶ್ ಹೇಳುತ್ತಾನೆ.
ತನ್ನ ಪತಿಯ ಮನೆಯವರ ಪ್ರೋತ್ಸಾಹದ ಹಿನ್ನೆಲೆಯಲ್ಲಿ 2005ರಲ್ಲಿ ಅನಿಮಾ ಅವರು 9ನೆ ತರಗತಿಗೆ ಸೇರ್ಪಡೆಗೊಂಡಿದ್ದರು. ಪಿಫಾ ರವೀಂದ್ರ ಮುಕ್ತ ಶಾಲೆಯಲ್ಲಿ ಅವರು ತನ್ನ ಮಾಧ್ಯಮಿಕ ಶಿಕ್ಷಣವನ್ನು ಪೂರೈಸಿದ್ದರು.
"ನನ್ನೆಲ್ಲಾ ಗೃಹಕೃತ್ಯಗಳನ್ನು ಪೂರೈಸಿ ನಾನು ಓದಲು ಕುಳಿತುಕೊಳ್ಳುತ್ತೇನೆ. ತನ್ನ ಪುತ್ರ ಖಾಸಗೀ ಟ್ಯೂಶನ್ ಪಡೆಯುತ್ತಿದ್ದು, ಆತ ತನ್ನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದಾನೆ" ಎಂಬುದಾಗಿ ಅನಿಮಾ ಹೇಳುತ್ತಾರೆ. ಇವರು ಅಂಗನವಾಡಿ ಕಾರ್ಯಕರ್ತೆಯೂ ಹೌದು.
ಇದೇ ವೇಳೆ ತನ್ನ ಸಹೋದರಿ ಪೂರ್ಣಿಮಾಳೂ ಸಹ ಇದೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ ಎಂದು ಹೇಳುವ ಅನಿಮಾ, ಅಕೆಯೂ ತನಗೆ ಸಾಕಷ್ಟು ಸಹಾಯ ಮಾಡುತ್ತಾಳೆ ಎಂದು ಹೇಳುತ್ತಾರೆ.
ಒಬ್ಬ ವಿದ್ಯಾರ್ಥಿಯಾಗಿ ಅನಿಮಾ ಅತ್ಯಂತ ಉತ್ಸಾಹ ಹೊಂದಿದ್ದಾರೆ ಎಂಬುದಾಗಿ ಮಂಡಲ್ ಹೊಗಳುತ್ತಾರೆ. ಆಕೆ ತರಗತಿಯಲ್ಲಿ ಸ್ನೇಹಪೂರ್ವಕವಾಗಿ ವರ್ತಿಸುತ್ತಾರೆ. ಈ ವಯಸ್ಸಿನಲ್ಲೂ ಕಲಿಯುವ ಅವರ ಉತ್ಸಾಹವನ್ನು ಪರಿಗಣಿಸಿ ನಾವು ಅವರನ್ನು ಶಾಲೆಗೆ ಸೇರ್ಪಡೆ ಮಾಡಿಕೊಂಡಿದ್ದೇವೆ ಎಂದು ಮಂಡಲ್ ತಿಳಿಸಿದ್ದಾರೆ.