ಗಡಿಯಾಚೆಗಿನ ಭಯೋತ್ಪಾದನೆಯು ಭಾರತಕ್ಕೆ ಬೆದರಿಕೆಯಾಗಿ ಉಳಿದಿದೆ ಎಂಬುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
"ಭಾರೀಯಾದ ನಿಗಾ ವಹಿಸಬೇಕಾದ ಅವಶ್ಯಕತೆ ಇದೆ. ಪಾಕಿಸ್ತಾನದಲ್ಲಿರುವ ಉಗ್ರವಾದಿಗಳು ಭಾರತದ ಮೇಲೆ ಮತ್ತೆ ದಾಳಿ ನಡೆಸುವ ಕುರಿತು ವಿಶ್ವಾಸಾರ್ಹ ಮಾಹಿತಿಗಳಿವೆ" ಎಂಬುದಾಗಿ ಅವರು ಆಂತರಿಕ ಭದ್ರತಾ ಸಮ್ಮೇಳನದಲ್ಲಿ ನುಡಿದರು.
ಇದಕ್ಕೂ ಮುಂಚಿತವಾಗಿ ಮಾತನಾಡಿದ ಗೃಹ ಸಚಿವ ಪಿ.ಚಿದಂಬರಂ ಅವರು ಭಯೋತ್ಪಾದನೆಯ ತೀವ್ರತೆ ಕುಂಟಿತಗೊಂಡಿಲ್ಲ ಮತ್ತು ರಾಷ್ಟ್ರವು ತನ್ನ ಭದ್ರತೆಯನ್ನು ಕಡಿಮೆಗೊಳಿಸಲಾಗದು ಎಂಬುದಾಗಿ ಹೇಳಿದರು.
"ನಕ್ಸಲರು ಶಸ್ತ್ರಾಸ್ತ್ರ ತೊರೆಯಬೇಕು ಮತ್ತು ಹಿಂಸಾಚಾರ ತೊರೆಯಬೇಕು ಎಂಬ ಷರತ್ತಿನ ಮೇಲೆ ರಾಜ್ಯ ಸರ್ಕಾರಗಳು ನಕ್ಸಲರೊಂದಿಗೆ ಮಾತುಕತೆ ನಡೆಸುವುದನ್ನು ನಾವು ಪ್ರೋತ್ಸಾಹಿಸುತ್ತೇವೆ ಎಂದು ಅವರು ಆಂತರಿಕ ಭದ್ರತಾ ಸಮ್ಮೇಳನವನ್ನು ಉದ್ಘಾಟಿಸುತ್ತಾ ನುಡಿದರು.
ಕಳೆದ ಜನವರಿಯಲ್ಲಿ ಸಭೆ ಸೇರಿದ್ದಾಗ ಒಪ್ಪಿಕೊಂಡಿರುವಂತೆ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ತಾವು ಕೈಕೊಂಡಿರುವ ಕ್ರಮಗಳ ಕುರಿತು ಮುಖ್ಯಮಂತ್ರಿಗಳು ವರದಿಗಳನ್ನು ಸಲ್ಲಿಸಲಿದ್ದಾರೆ.
ಏಳು ತಿಂಗಳ ಈ ವರದಿಯನ್ನು ಈ ಅವಧಿಯಲ್ಲಿ ಗೃಹ ಇಲಾಖೆಯು ಕೈಗೊಂಡಿರುವ ಕ್ರಮಗಳ ಕುರಿತು ತುಲನೆ ಮಾಡಲಾಗುವುದು. ಈ ತುಲನೆಯನ್ನು ಪ್ರಧಾನಿಗಳ ಸಮ್ಮುಖದಲ್ಲಿ ನಡೆಸಲಾಗುವುದು.
ಕರ್ನಾಟಕದಲ್ಲಿ ಕೋಮುಗಲಭೆ ಹೆಚ್ಚಿದೆ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮನಮೋಹನ್ ಸಿಂಗ್ ಅವರು ಕರ್ನಾಟಕದಲ್ಲಿ ಕೋಮು ಗಲಭೆ ಹೆಚ್ಚಿದೆ ಎಂದು ನುಡಿದಿದ್ದು, ಇದನ್ನು ನಿಯಂತ್ರಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ. ಆದರೆ ಪ್ರಧಾನಿಗಳ ಈ ಹೇಳಿಕೆಗೆ ಸರ್ಕಾರದ ದೆಹಲಿ ಪ್ರತಿನಿಧಿ ಧನಂಜಯ ಕುಮಾರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕೋಮು ಗಲಭೆ ನಡೆದಿದ್ದಾಗ ಸೂಕ್ತ ಕ್ರಮಕೈಗೊಳ್ಳಲಾಗಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಕೋಮುಗಲಭೆ ನಡೆದಿರುವ ಉದಾಹರಣೆಗಳಿಲ್ಲ ಎಂದು ಹೇಳಿದ್ದಾರೆ.