ಭಯೋತ್ಪಾದನೆ ವಿಷಯದಲ್ಲಿಯೂ 'ರಾಜಕೀಯ' ಮಾಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ಕಿಡಿ ಕಾರಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಭಯೋತ್ಪಾದಕರ ಪರವಾಗಿ ಯಾರಿದ್ದಾರೆ ಮತ್ತು ವಿರೋಧವಾಗಿ ಯಾರಿದ್ದಾರೆ ಎಂಬ ಬಗ್ಗೆ ಖಚಿತವಾದ ರೇಖೆಯೊಂದನ್ನು ನಾವು ಎಳೆಯಬೇಕಿದೆ ಎಂದು ಕಿಡಿ ಕಾರಿದ್ದಾರೆ.
ಸುದೀರ್ಘ ಕಾಲದಿಂದ ಕೇಂದ್ರದಲ್ಲಿ ಬಿದ್ದಿರುವ ಭಯೋತ್ಪಾದನಾ ನಿಗ್ರಹ ಮಸೂದೆಯನ್ನು ಕೇಂದ್ರವು ಕೆಲವೊಂದು ವಿಧಿಗಳನ್ನು ಕಿತ್ತು ಹಾಕುವಂತೆ ನಿರ್ದೇಶನ ನೀಡಿ ಇತ್ತೀಚೆಗಷ್ಟೇ ಮರಳಿಸಿತು ಎಂದು ಗುಜರಾತ್ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಗುಜ್‌ಕೋಕ)ಯನ್ನು ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ತಿರಸ್ಕರಿಸಿರುವ ಬಗ್ಗೆ ತೀವ್ರ ಕುಪಿತರಾಗಿರುವ ಮೋದಿ ಸೋಮವಾರ ನಡೆದ ಆಂತರಿಕ ಭದ್ರತೆಗೆ ಸಂಬಂಧಿಸಿದ ಮುಖ್ಯಮಂತ್ರಿಗಳ ಸಭೆಯಲ್ಲಿ ಹೇಳಿದರು.
ಈಗಾಗಲೇ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿರುವ ಭಯೋತ್ಪಾದನಾ ವಿರೋಧಿ ಕಾಯ್ದೆಗಳ ಭಾಗವಾಗಿರುವ ವಿಧಿಗಳನ್ನು ಕಿತ್ತು ಹಾಕುವಂತೆ ಕೇಂದ್ರ ಸರಕಾರ ಸೂಚಿಸಿದ್ದೇಕೆ ಎಂಬುದು ನನಗಿನ್ನೂ ಅರ್ಥವೇ ಆಗಿಲ್ಲ ಎಂದು ಮೋದಿ ಹೇಳಿದರು.
ಸೋ ಕಾಲ್ಡ್ ಉದಾರ ಪ್ರಜಾಪ್ರಭುತ್ವ ಆಡಳಿತವಿರುವ ಮತ್ತು ಮಾನವ ಹಕ್ಕುಗಳ ಉದ್ಧಾರಕ ತಾನೆಂದು ಹೇಳಿಕೊಳ್ಳುತ್ತಿರುವ ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾ ಮುಂತಾದ ದೇಶಗಳು ಕೂಡ, ಪ್ರಸ್ತಾಪಿತ ಗುಜ್‌ಕೋಕ ಕಾಯ್ದೆಗಿಂತಲೂ ಕಠಿಣವಾದ ವಿಧಿಗಳನ್ನು ಹೊಂದಿರುವ ಕಾನೂನು ರೂಪಿಸಿದೆ ಎಂದ ಮೋದಿ, ತಮ್ಮ ಭಯೋತ್ಪಾದನಾ ನಿಗ್ರಹ ಮಸೂದೆಯನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಾ, ಭಯೋತ್ಪಾದನೆಯ ಪಿತೂರಿದಾರರನ್ನು ಶಿಕ್ಷಿಸಲು ಮಾತ್ರವಲ್ಲದೆ, ಸುಶಿಕ್ಷಿತ ಯುವ ಜನಾಂಗವು ಭಯೋತ್ಪಾದನೆಯ ತತ್ವದತ್ತ ಆಕರ್ಷಿತರಾಗದಂತೆಯೂ ತಡೆಯುವ ಉದ್ದೇಶ ಹೊಂದಿದೆ ಎಂದರು.