ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಸೋಮವಾರ ಭದ್ರತಾಪಡೆಗಳು ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಆಗಿದ್ದ ಅಲ್ತಾಫ್ ಹುಸೈನ್ ಎಂಬಾತನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂಬುದಾಗಿ ಪೊಲೀಸರು ಹೇಳಿದ್ದಾರೆ.
ಖಚಿತ ಮಾಹಿತಿಯ ಆಧಾರದಲ್ಲಿ ಮಹೋರೆಯಲ್ಲಿನ ಉಗ್ರನ ಅಡಗುತಾಣದ ಮೇಲೆ ದಾಳಿ ನಡೆಸಲಾಯಿತು ಎಂಬುದಾಗಿ ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಹುಸೈನ್ ಹಲವಾರು ಕೊಲೆಗಳು, ಗುಂಡುಹಾರಾಟ ಹಾಗೂ ಬಾಂಬ್ ದಾಳಿಗೆ ಜವಾಬ್ದಾರನಾಗಿದ್ದಾನೆ. ಮಹೋರೆ ಜಮ್ಮುವಿನಿಂದ 150 ಕಿಲೋಮೀಟರ್ ದೂರದಲ್ಲಿದೆ.
"ಇದು ಭದ್ರತಾ ಪಡೆಗಳಿಗೆ ಸಂದ ಅತಿದೊಡ್ಡ ಯಶಸ್ಸು ಹಾಗೂ ಉಗ್ರವಾದಿ ಸಂಘಟನೆಗಳಿಗೆ ಬಹುದೊಡ್ಡ ಹಿನ್ನಡೆಯಾಗಿದೆ. ಅಲ್ತಾಫ್ ಹುಸೈನ್ ಹಿಜ್ಬುಲ್ ಮುಜಾಹಿದೀನ್‌ನ ಪ್ರಮುಖ ಕಮಾಂಡ್ ಆಗಿದ್ದ" ಎಂದು ವಕ್ತಾರರು ಹೇಳಿದ್ದಾರೆ.
ಕಳೆದೊಂದು ವಾರದಲ್ಲಿ ಭದ್ರತಾಪಡೆಗಳು ಎಂಟು ಉಗ್ರಗಾಮಿಗಳನ್ನು ಗುಂಡಿಟ್ಟು ಕೊಂದಿದ್ದಾರೆ. ಇವುಗಳಲ್ಲಿ ಹೆಚ್ಚಿನವರು ಹಿಜ್ಬುಲ್ ಹಾಗೂ ಲಷ್ಕರೆ-ಇ-ತೋಯ್ಬಾ ಸಂಘಟನೆಗಳ ಕಾರ್ಯಕರ್ತರಾಗಿದ್ದಾರೆ. ಉಗ್ರರು ಉತ್ತರ ಜಮ್ಮು, ಹಿಮಾಲಯದ ಬೆಟ್ಟದ ಪಿರ್ ಪಂಜಾಲ್ ವಲಯದಲ್ಲಿ ಅವಿತು ಕುಳಿತಿದ್ದರೆಂದು ಅವರು ತಿಳಿಸಿದ್ದಾರೆ.