ಅಕ್ರಮ ಮದ್ಯ ಮರಾಟದ ವಿರುದ್ಧ ಭದ್ರಕಾಳಿಯರಾದ ಮಹಿಳೆಯರು, ಕಾನೂನು ಬಾಹಿರವಾದ ಅಂಗಡಿಯಲ್ಲಿ ಮಧುಪಾನ ಮಾಡುತ್ತಿದ್ದ ಪುರುಷರನ್ನು ಚೆನ್ನಾಗಿ ಥಳಿಸಿ ಜಗ್ಗಾಡಿದ ಘಟನೆ ಸಂಭವಿಸಿದೆ.
ಅಕ್ರಮ ಸಾರಾಯಿ ಅಂಗಡಿಗಳಿಗೆ ನುಗ್ಗಿದ ಇವರು ಚಪ್ಪಲಿ ಮತ್ತು ಪೊರಕೆಗಳಿಂದ ಕುಡಿದು ಮಜಾಮಾಡುತ್ತಿದ್ದ ಗಂಡಸರನ್ನು ಥಳಿಸಿದ್ದಾರೆ. ಕೀರ್ತಿನಗರ ಪ್ರದೇಶದ ಕೊಳಗೇರಿ ನಿವಾಸಿ ಮಹಿಳೆಯರು ಈ ಅಂಗಡಿಗೆ ಧಾಂಗುಡಿ ಇಟ್ಟಾಗ ಕೆಲವು ಪುರುಷರು ಮದ್ಯಪಾನ ಮಾಡುತ್ತಿರುವುದನ್ನು ಕಂಡು, ಕಾಲಲ್ಲಿದ್ದುದನ್ನು ಕೈಗೆತ್ತಿಕೊಂಡಿದ್ದಾರೆ.
ಸಂಚಾರಿ ಬಾರ್‌ಗಳಂತಿರುವ ಈ ಅಂಗಡಿಗಳಿಗೆ ಆವೇಶ ಭರಿತ ಮಹಿಳೆಯರು ಪ್ರವೇಶಿಸುತ್ತಲೇ ಕೆಲವು 'ಸ್ಮಾರ್ಟ್' ಕುಡುಕರು ಪರಾರಿಯಾದರೆ, ಮೂರ್ನಾಲ್ಕು ಮಂದಿ ಅಲ್ಲೆ ಉಳಿದಿದ್ದರು. ಕೈಗೆ ಸಿಕ್ಕವರನ್ನು ಚಪ್ಪಲಿ ಮತ್ತು ಪೂರಕೆಗಳಿಂದ ಬಡಿದರು.
ಇಬ್ಬರು ಮಾರಾಟಗಾರರನ್ನೂ ಹಿಗ್ಗಾಮುಗ್ಗಾ ಜಗ್ಗಾಡಿದ ಮಹಿಳೆಯರು ತಮ್ಮ ಶಕ್ತಿ ಏನು ಎಂಬುದರ ರುಚಿಯನ್ನು ಇವರಿಗೂ ತೋರಿದರು.
ಕೊಳಗೇರಿ ಪ್ರದೇಶಗಳಲ್ಲಿ ಕಳ್ಳಭಟ್ಟಿ ಮಾರಾಟ ಮಾಡುವುದನ್ನು ತಡೆಯಲು ವಿಫಲರಾಗಿರುವ ಪೊಲೀಸರು ಮತ್ತು ಜಿಲ್ಲಾಡಳಿತೆಯ ವಿರುದ್ಧವೂ ರೊಚ್ಚಿಗೆದ್ದ ಮಹಿಳೆಯರು ಘೋಷಣೆ ಕೂಗಿದರು. ಕಳ್ಳಭಟ್ಟಿ ಕುಡುಕರ ವಿರುದ್ಧ ಮಹಿಳೆಯರ ಪ್ರತಿಭಟನೆಯಿಂದಾಗಿ ಸುಮಾರು ಅರ್ಧ ಗಂಟೆಗಳ ಕಾಲ ಸಂಚಾರ ವ್ಯವಸ್ಥೆ ಅಸ್ತ್ಯವ್ಯಸ್ಥವಾಗಿತ್ತು. ಬಳಿಕ ಆಗಮಿಸಿದ ಪೊಲೀಸರು ಪ್ರತಿಭಟನಾ ನಿರತ ಮಹಿಳಾಮಣಿಗಳ ಮನ ಒಲಿಸುವಲ್ಲಿ ಯಶಸ್ವಿಯಾದರು.
ಕೊಳಗೇರಿ ಪ್ರದೇಶದಲ್ಲಿ ಅಕ್ರಮ ಸಾರಾಯಿ ಮಾರಾಟವಾಗದಂತೆ ತಡೆಯುತ್ತೇವೆ ಮತ್ತು ಕುಡುಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ ಬಳಿಕ ಪ್ರತಿಭಟನಾ ನಿರತ ವನಿತೆಯರು ರಸ್ತೆ ತೆರವು ಮಾಡಿದರು.