ಮುಂಬೈಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪುವುದರೊಂದಿಗೆ ದೇಶದಾದ್ಯಂತ ಎಚ್1ಎನ್1 ಸೋಂಕಿಗೆ ಬಲಿಯಾದವರ ಸಂಖ್ಯೆ 29ಕ್ಕೇರಿದೆ. ಅದೇ ಹೊತ್ತಿಗೆ ರಾಜ್ಯದಲ್ಲಿ ಮತ್ತೆ 12 ಮಂದಿಗೆ ಸೋಂಕು ತಗುಲುವುದರೊಂದಿಗೆ ಒಟ್ಟಾರೆ ಪ್ರಕರಣಗಳ ಸಂಖ್ಯೆ 172ಕ್ಕೆ ಮುಟ್ಟಿದೆ.
ಹಂದಿ ಜ್ವರಕ್ಕೆ ಅತೀ ಹೆಚ್ಚು ಬಲಿಯಾದ ಕುಖ್ಯಾತಿ ಪುಣೆಯದ್ದು. ಇಲ್ಲಿ ಇದುವರೆಗೆ 13 ಮಂದಿ ಬಲಿಯಾಗಿದ್ದಾರೆ. ಈ ಬಗ್ಗೆ ಕಠಿಣ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಡಳಿತವು, ಶಾಲಾ-ಕಾಲೇಜುಗಳು ಮತ್ತು ಸಿನಿಮಾ ಮಂದಿರಗಳನ್ನು ಆಗಸ್ಟ್ 23ರವರೆಗೆ ತೆರೆಯದಂತೆ ತನ್ನ ಆದೇಶವನ್ನು ವಿಸ್ತರಿಸಿದೆ.
ಸೋಮವಾರ ಮುಂಬೈಯಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಹಂದಿಜ್ವರದಿಂದ ಸಾವನ್ನಪ್ಪಿದ ವರದಿಗಳು ಬಂದಿವೆ. ಹೆಚ್ಚಿನ ವಿವರಗಳು ಇನ್ನೂ ಲಭ್ಯವಾಗಿಲ್ಲ.
ರಾಜ್ಯದಲ್ಲಿ ಮತ್ತೆ 12 ಪ್ರಕರಣ ಬೆಂಗಳೂರಿನಲ್ಲಿ 11 ಹಾಗೂ ಬೆಳಗಾವಿಯಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ತಗುಲುವುದರೊಂದಿಗೆ ಇದುವರೆಗೆ 172 ಪ್ರಕರಣಗಳು ಕರ್ನಾಟಕದಲ್ಲಿ ಪತ್ತೆಯಾಗಿವೆ.
ಬೆಂಗಳೂರಿನಲ್ಲಿ 85, ಉಡುಪಿಯಲ್ಲಿ ನಾಲ್ವರು ಸೇರಿದಂತೆ ಒಟ್ಟು 89 ಸೋಂಕು ಪೀಡಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 83 ಮಂದಿಯನ್ನು ಗುಣಮುಖರಾದ ಕಾರಣ ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಇದುವರೆಗೆ ಎಚ್1ಎನ್1 ಸೋಂಕಿಗೆ ಐವರು ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಬಿಟಿಎಂ ಲೇಔಟ್ ನಿವಾಸಿ ರೂಪಾ (26), ವಿಜಯನಗರದ ಶಿವಣ್ಣ (55), ದೊಮ್ಮಸಂದ್ರದ ಮಂಜುನಾಥ್ (28), ಅಶ್ವತ್ಥ ನಗರದ ಸಂಶಾದ್ ಬೇಗಂ (27) ಹಾಗೂ ಮಲ್ಲೇಶ್ವರದ ಶಿಲ್ಪಾ ಹೆಗಡೆ (27) ಹಂದಿಜ್ವರದಿಂದಾಗಿ ಸಾವನ್ನಪ್ಪಿದವರು.