ಎಚ್1ಎನ್1: ಶಾಲೆಗಳಲ್ಲಿ ಬೆಳಗ್ಗಿನ ಪ್ರಾರ್ಥನೆಗಳಿಗೆ ಕತ್ತರಿ
ನವದೆಹಲಿ, ಮಂಗಳವಾರ, 18 ಆಗಸ್ಟ್ 2009( 11:08 IST )
ರಾಷ್ಟ್ರಾದ್ಯಂತ ಶಾಲೆಗಳಲ್ಲಿ ಮುಂಜಾನೆಯ ಸಮಾವೇಶಗಳನ್ನು ನಡೆಸದಂತೆ ಸರ್ಕಾರವು ನಿರ್ದೇಶನ ನೀಡಿದೆ. ಹಂದಿಜ್ವರ ತಡೆ ಕಾರ್ಯಕ್ರಮದಂಗವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಅಲ್ಲದೆ, ತರಗತಿ ಶಿಕ್ಷಕರು ಕಡ್ಡಾಯವಾಗಿ ಈ ರೋಗ ಲಕ್ಷಣಗಳಿವೆಯೇ ಎಂಬುದಾಗಿ ಪ್ರತೀ ವಿದ್ಯಾರ್ಥಿಗಳನ್ನು ಪರೀಕ್ಷಿಸಬೇಕು ಎಂದು ಸೂಚಿಸಲಾಗಿದೆ.
ಈ ಕುರಿತು ಕೆಲವೇದಿನಗಳಲ್ಲಿ ಈ ಮಾರ್ಗದರ್ಶಿ ಸೂತ್ರಗಳನ್ನು ನೀಡುವುದಾಗಿ ಆರೋಗ್ಯಸಚಿವರು ಹಿರಿಯ ಸಂಪಾದಕರ ಸಮೂಹಕ್ಕೆ ತಿಳಿಸಿದ್ದಾರೆ.
ಮುಂಜಾನೆಯ ಪ್ರಾರ್ಥನಾ ಸಮಾವೇಶಗಳಲ್ಲಿ ವಿದ್ಯಾರ್ಥಿಗಳು ಪರಸ್ಪರ ನಿಕಟ ಸಂಪರ್ಕಕ್ಕೆ ಬರುವ ಕಾರಣ ಇದು ವೈರಸ್ ಹರಡುವ ಮೂಲ ಸ್ಥಾನವಾಗುವ ಸಾಧ್ಯತೆ ಇದೆ ಎಂದು ಅಜಾದ್ ಹೇಳಿದ್ದಾರೆ.
ಪ್ರತೀವಿದ್ಯಾರ್ಥಿಗಳು ಕುಳಿತಿರುವ ಸ್ಥಳಕ್ಕೆ ತೆರಳಿ ಯಾರಿಗಾದರೂ ಫ್ಲೂ ಲಕ್ಷಣಗಳು ಕಾಣಿಸಿಕೊಂಡರೆ ಅಂತಹ ವಿದ್ಯಾರ್ಥಿಗಳನ್ನು ತಕ್ಷಣವೇ ಮನೆಗೆ ಕಳುಹಿಸಿ ಒಂದು ವಾರ ಮನೆಯಲ್ಲೇ ಇರುವಂತೆ ಸಲಹೆ ನೀಡಬೇಕು ಎಂದೂ ಸಚಿವರು ಹೇಳಿದ್ದಾರೆ.
ಮುಂದಿನ ಐದರಿಂದ ಏಳು ತಿಂಗಳೊಳಗಾಗಿ ಹೊಸ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು ಇದಕ್ಕೆ ವಿಶ್ವಆರೋಗ್ಯ ಸಂಘಟನೆಯು ಅಟ್ಲಾಂಟ ಮೂಲದ ರೋಗ ನಿಯಂತ್ರಣ ಕೇಂದ್ರದಿಂದ ಬೀಜ ಒದಗಿಸಿದೆ ಎಂದು ಅವರು ಹೇಳಿದ್ದಾರೆ.
ಶತಮಾನಗಳ ಹಳೆಯದಾದ ಸಾಂಕ್ರಾಮಿಕ ರೋಗಗಳ ಕಾಯ್ದೆಯ ಬದಲಿಗೆ ಹೊಸ ಕಾನೂನನ್ನು ಸಿದ್ಧಪಡಿಸಲಾಗಿದ್ದು, ಇಂತಹ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಇನ್ನಷ್ಟು ಸೋಂಕು ಜಾಡ್ಯಗಳನ್ನು ಪಟ್ಟಿಗೆ ಸೇರ್ಪಡೆಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.