ಅಸ್ಸಾಂ ರಾಜ್ಯಪಾಲ ಸಯ್ಯದ್ ಸಿಬ್ತೆ ರಾಜಿ ಅವರು ಪದತ್ಯಾಗ ಮಾಡುವಂತೆ ಕೇಂದ್ರ ಸರ್ಕಾರ ತಾಕೀತು ಮಾಡಿದೆ. ಸಯ್ಯದ್ ಜಾರ್ಖಂಡ್ ರಾಜ್ಯಪಾಲರಾಗಿದ್ದ ವೇಳೆ ಅವರ ಸಹಾಯಕರು ಮತ್ತು ಸಿಬ್ಬಂದಿಗಳು ವರ್ಗಾವಣೆ ಹಾಗೂ ನೇಮಕಾತಿಗಳ ವ್ಯವಹಾರ ನಡೆಸುತ್ತಿದ್ದು ಹಣಗಳಿಸುತ್ತಿದ್ದರು ಎಂಬ ಆಪಾದನೆಯ ಹಿನ್ನೆಲೆಯಲ್ಲಿ ಅವರಿಗೆ ಸ್ಥಾನ ತೊರೆಯುವಂತೆ ಸೂಚಿಸಲಾಗಿದೆ.
ರಾಜಿ ಅವರು ಜಾರ್ಖಂಡ್ ರಾಜ್ಯಪಾಲರಾಗಿದ್ದ ವೇಳೆ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ದೃಢಪಡಿಸಿದೆ ಎಂಬುದಾಗಿ ಹೇಳಲಾಗಿದೆ. ಸಿಬಿಐ ದಾಳಿಗಳು ಮತ್ತು ಆಪಾದನೆಗಳ ಹಿನ್ನೆಲೆಯಲ್ಲಿ ಸ್ಥಾನ ತೊರೆಯುವಂತೆ ಪ್ರಧಾನಿ ಮನಮೋಹನ್ ಸಿಂಗ್ ರಾಜ್ಯಪಾಲರಿಗೆ ತಾಕೀತು ಮಾಡಿದ್ದಾರೆ.
ಯುಪಿಎಗೆ ಮುಜುಗರ ತಪ್ಪಿಸಲು ಅನಾರೋಗ್ಯದ ಕಾರಣ ನೀಡಿ ಕಚೇರಿ ತೆರವುಗೊಳಿಸುವಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಕಳೆದ ವಾರದ ಸಭೆಯೊಂದರಲ್ಲಿ ತಿಳಿಸಿದ್ದರು ಎಂದು ಹೇಳಾಗಿದೆ. ಆದರೆ ರಾಜಿ ಅವರು ಇದಕ್ಕೊಪ್ಪದಾಗ ರಾಜೀನಾಮೆ ನೀಡುವಂತೆ ಹೇಳಲಾಗಿದೆ. ರಾಜಿ ಅವರು ಸಮರ್ಥನೆ ನೀಡಲು ಸಮಯ ಕೋರಿದ್ದರೆನ್ನಲಾಗಿದೆ.
ಅವರ ಮಾಜಿ ಸಹಾಯಕರಾದ ರಾಜೇಶ್ ಠಾಕೂರ್ ಹಾಗೂ ಐಎಎಸ್ ಅಧಿಕಾರಿ ಅವಿನಾಶ್ ಕುಮಾರ್ ಅವರು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಮತ್ತು ಜಾರ್ಖಂಡ್‌ನಲ್ಲಿ ನಡೆಯಲಿರುವ 34ನೆ ರಾಷ್ಟ್ರೀಯ ಕ್ರೀಡಾಕೂಟದ ನಿಧಿಯನ್ನು ದುರ್ಬಳಕೆ ಮಾಡಿದ್ದಾರೆ ಎಂದು ದೂರಲಾಗಿದೆ.