'ಟಿವಿ ನೋಡಬೇಡಿ' ಎಂಬ ಹೊಸ ಫರ್ಮಾನನ್ನು ಜಮ್ಮು ಕಾಶ್ಮೀರದಲ್ಲಿ ಲಷ್ಕರೆ-ಇ-ತೋಯ್ಬಾ ಸಂಘಟನೆ ಹೊರಡಿಸಿದೆ. ತಾಲಿಬಾನ್ ನೀಡಿರುವ ಸೂಚನೆಯನ್ವಯ ಬನಿಹಾಲ್ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಲಷ್ಕರೆ ಉಗ್ರಗಾಮಿಗಳು ಟಿವಿ ನೋಡುವುದರ ವಿರುದ್ಧ ನಿಷೇಧ ಹೇರಿದ್ದು, ಇದು ಇಸ್ಲಾಮಿ ವಿರೋಧಿ ಚಟುವಟಿಕೆಯಾಗಿದೆ ಎಂದು ಹೇಳಿದೆ.
ಟಿವಿನೋಡಿದ 'ತಪ್ಪಿನ' ಪರಿಣಾಮ ಏನು ಎಂಬುದನ್ನು ಇಲ್ಲಿನ ನಿವಾಸಿ ಗುಲಾಂ ನಬಿ ಎಂಬವರ ಬೆನ್ನು ಮತ್ತು ಕೈಕಾಲುಗಳು ಹೇಳತ್ತವೆ. ಟಿವಿ ನೋಡಿದ ಕಾರಣಕ್ಕಾಗಿ ಇವರನ್ನು ಲಷ್ಕರೆ ಕಾರ್ಯಕರ್ತರು ಚೆನ್ನಾಗಿ ಥಳಿಸಿದ್ದು ಇವರ ಮೈಕೈಯೆಲ್ಲ ಬಾತು ಹೋಗಿದೆ. "ಅಪರಿಚಿತ ಬಂದೂಕುಧಾರಿಗಳು ನನ್ನ ಮನೆಗೆ ನುಗ್ಗಿದರು. ಅವರು ನನ್ನ ಟಿವಿ ಸೆಟ್ ಒಡೆದು ಹಾಕಿದ್ದು, ನನ್ನನ್ನು ಹಿಗ್ಗಾಮುಗ್ಗಾ ಥಳಿಸಿದರು" ಎನ್ನುತ್ತಾರೆ ನಬಿ.
ತಾಲಿಬಾನ್ ಶೈಲಿಯಲ್ಲೇ ಉಗ್ರರು ದಾಳಿ ಮಾಡಿದ್ದು ಇನ್ನು ಮುಂದೆ ಯಾರೂ ಟಿವಿ ನೋಡುವ ಧೈರ್ಯ ಮಾಡಲಾರರು ಎಂಬುದನ್ನು ಖಚಿತ ಪಡಿಸಿಕೊಂಡಿದ್ದಾರೆ.
ಲಷ್ಕರೆಯ ಈ ಹೊಚ್ಚಹೊಸ ದಿಕ್ತತ್ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗ್ರಾಮಸ್ಥರೊಬ್ಬರು "ಆರು ಮಂದಿ ಉಗ್ರರು ನನ್ನ ಮನೆಗೆ ಪ್ರವೇಶಿಸಿದರು. ಮೂವರು ನನ್ನ ಟಿವಿ ಒಡೆದು ಹಾಕಿದರೆ ಮತ್ತೊಬ್ಬ ನನಗೆ ಹೊಡೆದ" ಎಂದು ಹೇಳುತ್ತಾರೆ.
ಟಿವಿ ನೋಡೋದು ನಿಲ್ಲಿಸದಿದ್ದರೆ, ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದಾಗಿ ಲಷ್ಕರೆ ಉಗ್ರರು ತಾಕೀತು ಮಾಡಿದ್ದಾರೆ. "ಮೂರ್ಖರ ಪೆಟ್ಟಿಗೆಯು ಎಲ್ಲ ಸಮಸ್ಯೆಗಳ ಕೇಂದ್ರವಾಗಿದ್ದು, ಗ್ರಾಮಸ್ಥರ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನು ತುರುಕಲು ಇದುವೇ ಮೂಲ ಕಾರಣ" ಎಂಬುದಾಗಿ ಹೊಸದಾಗಿ ನೀಡಲಾಗಿರುವ ದಿಕ್ತತ್‌ನಲ್ಲಿ ಹೇಳಲಾಗಿದೆ.
ಹಿಂಸಾಚಾರ ನಡೆಸುವುದರೊಂದಿಗೆ ಮಸೀದಿಯ ಆವರಣ ಗೋಡೆಯಲ್ಲಿ ಲಷ್ಕರೆ ಉಗ್ರರು ಭಿತ್ತಿಚಿತ್ರ ಹಚ್ಚಿದ್ದು ಟಿವಿ ನೋಡದಂತೆ ಎಚ್ಚರಿಕೆ ನೀಡಿದ್ದಾರೆ.