ಮೊಹಮ್ಮದ್ ಆಲಿ ಜಿನ್ನಾರನ್ನು ಬಿಜೆಪಿ ನಾಯಕರು ಹೊಗಳುತ್ತಿರುವುದನ್ನು ತರಾಟೆಗೆ ತೆಗೆದುಕೊಂಡಿರುವ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆ, ಪಾಕಿಸ್ತಾನ ಸಂಸ್ಥಾಪಕನನ್ನು ಜಾತ್ಯತೀತ ಎಂದು ಕರೆಯುವುದು, ಭಾರತದ ಸ್ವಾತಂತ್ರ್ಯಕ್ಕಾಗಿ ರಕ್ತಚೆಲ್ಲಿದವರಿಗೆ ಮಾಡುವ ಅವಮಾನ ಎಂದು ಕಟುವಾಗಿ ಹೇಳಿದ್ದಾರೆ.
"ಜಿನ್ನಾರನ್ನು ಹೊಗಳುವ ಮೂಲಕ ಎಲ್.ಕೆ. ಆಡ್ವಾಣಿ ಅವರು ಸೈದ್ಧಾಂತಿಕ ಗೊಂದಲ ಸೃಷ್ಟಿಸಿದ್ದರು. ಇದೀಗ ಜಸ್ವಂತ್ ಸಿಂಗ್ ಅವರು ಇದಕ್ಕೆ ತುಪ್ಪ ಸುರಿದಿದ್ದಾರೆ" ಎಂಬುದಾಗಿ ಠಾಕ್ರೆ ಹೇಳಿದ್ದಾರೆ. "ಇತಂಹ ಸೈದ್ಧಾಂತಿಕ ಗೊಂದಲಗಳಿಂದಾಗಿ ಹಿಂದೂಗಳು ಭ್ರಮನಿರಸನಗೊಂಡಿದ್ದಾರೆ ಮತ್ತು ದಿಕ್ಕುತೋಚದಂತಾಗಿದ್ದಾರೆ. ಇದರ ಪರಿಣಾಮ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಕಂಡು ಬಂದಿದೆ" ಎಂಬುದಾಗಿ ಅವರು ಸಾಮ್ನಾ ಪತ್ರಿಕೆಗೆ ಬರೆದಿರುವ ಸಂಪಾದಕೀಯದಲ್ಲಿ ಹೇಳಿದ್ದಾರೆ.
ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರಕ್ಕಾಗಿ ಒತ್ತಾಯಿಸಿದ ವ್ಯಕ್ತಿಯೊಬ್ಬನನ್ನು ಜಾತ್ಯತೀತ ಎನ್ನಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಠಾಕ್ರೆ, ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಬಲಿದಾನ ಮಾಡಿರುವ ಹೋರಾಟಗಾರರಿಗೆ ಮಾಡಿರುವ ಅವಮಾನವಿದು" ಎಂಬುದಾಗಿ ಹೇಳಿದ್ದಾರೆ.
"ಜಿನ್ನಾ ಜಾತ್ಯತೀತರಾಗಿದ್ದರೆ ಆಡ್ವಾಣಿ ಯಾಕೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯ ತ್ಯಜಿಸಿ ಭಾರತಕ್ಕೆ ಬಂದರು" ಎಂಬುದಾಗಿ ಪ್ರಶ್ನಿಸಿದ್ದಾರೆ. ತಮ್ಮನ್ನು ತಾವು ನಿಷ್ಟಾವಂತ ಮತದಾರರೆಂದು ಹೇಳಿಕೊಳ್ಳುವ ಬಿಜೆಪಿ ನಾಯಕರು ಯಾಕೆ ಆಗೀಗ ಇಂತಹ ಜಾರಿಕೆಯನ್ನು ತೋರುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ, ಬಹುಶಃ ಜಿನ್ನಾ ಮೇಲೆ ಹೂವಿನ ಸುರಿಮಳೆಗೆ ಬಿಜೆಪಿಯೊಳಗೆ ಸ್ಫರ್ಧೆ ಏರ್ಪಟ್ಟಿರುವಂತೆ ತೋರುತ್ತದೆ" ಎಂದವರು ಕಟು ಟೀಕೆ ಮಾಡಿದ್ದಾರೆ.
ಜವಾಹರ್ ಲಾಲ್ ನೆಹರೂ ಅವರು ಕೇಂದ್ರೀಯ ಪದ್ದತಿಯ ಮೇಲೆ ವಿಶ್ವಾಸವಿರಿಸಿದ್ದರೂ ಜಿನ್ನಾ ಅವರ ಕೆಚ್ಚೆದೆಯಿಂದಾಗಿ ಭಾರತ ವಿಭಜನೆಯಾಗಿದೆ ಎಂದು ಜಸ್ವಂತ್ ಸಿಂಗ್ ಹೇಳಿದ್ದಾರೆ.
ಜಸ್ವಂತ್ ಹೇಳಿಕೆ ವೈಯಕ್ತಿಕ ಅಭಿಪ್ರಾಯ ಈ ನಡುವೆ ಜಿನ್ನಾ ಕುರಿತು ಜಸ್ವಂತ್ ಸಿಂಗ್ ಅವರ ಹೊಗಳಿಕೆಯು ಬಿಜೆಪಿಗೆ ಮುಜುಗರ ತರಿಸಿದ್ದು, ಪಕ್ಷವು ಈ ಕುರಿತು ಸ್ಪಷ್ಟೀಕರಣ ನೀಡಿದೆ. ಜಿನ್ನಾ ಕುರಿತ ಹೇಳಿಕೆಯು ಸಿಂಗ್ ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ಪಕ್ಷದ ಅಭಿಪ್ರಾಯವಲ್ಲ ಎಂದು ಲೋಕಸಭೆಯಲ್ಲಿ ಬಿಜೆಪಿ ಉಪನಾಯಕಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಜಸ್ವಂತ್ ಸಿಂಗ್ ಹೇಳಿಕೆಯನ್ನು ಆರ್ಎಸ್ಎಸ್ ಸಂಘಟನೆಯೂ ತೀವ್ರವಾಗಿ ಖಂಡಿಸಿದೆ.