ಗೊಂಡಾ(ಉತ್ತರ ಪ್ರದೇಶ), ಮಂಗಳವಾರ, 18 ಆಗಸ್ಟ್ 2009( 16:35 IST )
ಪ್ರೇಮಾದೇವಿ ಎಂಬ ಮಾಜಿ ಶಾಸಕರ ಪತ್ನಿ, 80ರ ಹರೆಯದ ವಯೋವೃದ್ಧೆ ತನ್ನ ಜೀವನದ ಈ ಸಂಧ್ಯಾಕಾಲದಲ್ಲಿ ತನ್ನ ತುತ್ತಿನ ಚೀಲ ತುಂಬಿಸಲು ಭಿಕ್ಷಾಟನೆಗೆ ಇಳಿಯಬೇಕಾದ ದಯನೀಯ ಪರಿಸ್ಥಿತಿ ಎದುರಾಗಿದೆ. ಎರಡು ಅವಧಿಗೆ ಶಾಸಕರಾಗಿದ್ದ ಸೂರಜ್ ಲಾಲ್ ಗುಪ್ತಾ ಅವರ ಪತ್ನಿ ಪ್ರೇಮಾ ದೇವಿ. ಸೂರಜ್ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಗೆ ನಿಕಟವಾದವರು ಎಂದೇ ಪರಿಗಣಿತವಾಗಿತ್ತು.
ಉತ್ತರ ಪ್ರದೇಶದ ಗೊಂಡಾ ಜಿಲ್ಲಾ ಆಸ್ಪತ್ರೆಯ ಹೊರಭಾಗದಲ್ಲಿ ಪ್ರೇಮಾ ದೇವಿ ಭಿಕ್ಷೆ ಬೇಡುತ್ತಿದ್ದುದು ಕಂಡುಬರುತ್ತಿತ್ತು. ತನ್ನನ್ನು ಗುರುತಿಸಿದ ಪತ್ರಕರ್ತರೊಂದಿಗೆ ಮಾತನಾಡಿದ ಪ್ರೇಮಾ ದೇವಿ ಅವರು, "ತನ್ನ ಪತಿ 2007ರಲ್ಲಿ ಮರಣಹೊಂದಿದ ಬಳಿಕ ತನ್ನ ಜೀವನ ದುಸ್ತರವಾಗಿದೆ. ತನ್ನನ್ನು ಮನೆಯಿಂದ ಹೊರಹಾಕಲಾಗಿದೆ" ಎಂದು ಅಲವತ್ತುಗೊಂಡಿದ್ದಾರೆ. 1960ರಲ್ಲಿ ಜನಸಂಘದಿಂದ ಸ್ಫರ್ಧಿಸಿದ್ದ ಸೂರಜ್ ಅವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ತನ್ನ ಪುತ್ರ ತನ್ನೊಂದಿಗೆ ಯಾವುದೇ ಸಂಬಂಧ ಇರಿಸಿಕೊಳ್ಳಲು ಬಯಸುವುದಿಲ್ಲ. ಆತ ಮನೆಬಿಡುವಂತೆ ತನ್ನನ್ನು ಒತ್ತಾಯಿಸಿದ ಎಂದು ಪ್ರೇಮಾದೇವಿ ಹೇಳಿದ್ದಾರೆ.
"ತನ್ನ ಪತಿಯ ಮರಣಾನಂತರ ತನ್ನ ಪುತ್ರ ಸಂಪೂರ್ಣ ಬದಲಾಗಿದ್ದು, ನನ್ನ ಜೀವನದ ವ್ಯವಸ್ಥೆಯನ್ನು ನಾನೇ ಮಾಡಿಕೊಳ್ಳಬೇಕು ಎಂದು ಹೇಳಿದ್ದ. ಪಿತ್ರಾರ್ಜಿತ ಮನೆಯನ್ನು ಮಾರಲು ಹೊರಟಾಗ ನಾನು ಆಕ್ಷೇಪಿಸಿದೆ. ಇದಕ್ಕಾಗಿ ಆತ ತನ್ನನ್ನು ಮನೆಯಿಂದ ಹೊರತಳ್ಳಿದ" ಎಂದು ಪ್ರೇಮಾ ಹೇಳಿಕೊಂಡಿದ್ದಾರೆ.
ಆಕೆಯ ಪರಿಸ್ಥಿತಿಯನ್ನು ಕಂಡ ಸ್ಥಳೀಯ ಪತ್ರಕರ್ತರು ಜಿಲ್ಲಾಡಳಿತವನ್ನು ಸಂಪರ್ಕಿಸಿದ್ದು, ಸಹಾಯ ಯಾಚಿಸಿದ್ದಾರೆ. "ಮಾಜಿ ಶಾಸಕರೊಬ್ಬರ ಪತ್ನಿ ಭಿಕ್ಷೆ ಬೇಡುತ್ತಿದ್ದಾರೆ ಎಂಬುದನ್ನು ಕೇಳಿ ಆಶ್ಚರ್ಯ ಮತ್ತು ಆಘಾತ ಉಂಟಾಯಿತು ಎಂಬುದಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಸುಖಲಾಲ್ ಭಾರ್ತಿ ಹೇಳಿದ್ದಾರೆ.
ಈ ಕುರಿತು ತನಿಖೆಗೆ ಆದೇಶ ನೀಡಲಾಗಿದ್ದು, ಪ್ರೇಮಾದೇವಿಯವರಿಗೆ ಸಹಾಯ ಮಾಡಲು ಸಾಧ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಭಾರ್ತಿ ತಿಳಿಸಿದ್ದಾರೆ. ಈ ಕುರಿತು ಸಹಾಯಕ್ಕಾಗಿ ಮುಖ್ಯಮಂತ್ರಿ ಮಾಯಾವತಿ ಅವರನ್ನು ಸಂಪರ್ಕಿಸುವುದಾಗಿ ಮುಖ್ಯ ಅಭಿವೃದ್ಧಿ ಅಧಿಕಾರಿ ರಾಮದಾಸ್ ಹೇಳಿದ್ದಾರೆ.
ಸೂರಜ್ ಲಾಲ್ ಗುಪ್ತಾ ಅವರು ಬಲರಾಂ ಜಿಲ್ಲಾ ಉತ್ರೌಲಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.