ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಹೆಚ್ಚಿದೆ ಎಂದು ಹೇಳಿರುವ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಪಕ್ಷದ ನಾಯಕತ್ವದಲ್ಲಿ ಬದಲಾವಣೆಗೆ ಕರೆನೀಡಿದ್ದು ಯುವಕರಿಗೆ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.
ಅವರು ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಬಿಜೆಪಿಗೆ ಯುವನಾಯಕತ್ವದ ಅಗತ್ಯವಿದೆ ಎಂದು ಹೇಳಿದ್ದಾರೆ. ಆದರೆ ಎಲ್.ಕೆ. ಆಡ್ವಾಣಿಯವರ ಉತ್ತರಾಧಿಕಾರಿ ಯಾರಾಗಬೇಕು ಎಂಬ ಪ್ರಶ್ನೆಯನ್ನು ಮುಕ್ತವಾಗಿಸಿದ್ದಾರೆ. ಅದಾಗ್ಯೂ, ನಾಯಕತ್ವವನ್ನು 'ಯಾವಾಗ ಮತ್ತು ಹೇಗೆ' ಬದಲಾಯಿಸಬೇಕು ಎಂಬುದು ಪಕ್ಷದ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.
ಭಾಗ್ವತ್ ಅವರು ಆರ್ಎಸ್ಎಸ್‌ಗೆ ನೇಮಕವಾಗಿರುವ ಅತ್ಯಂತ ಕಿರಿಯ ವಯಸ್ಸಿನ ಅಧ್ಯಕ್ಷರಾಗಿದ್ದಾರೆ. ಮುಂದಿನ ನಾಯಕತ್ವವು ಪಕ್ಷದ ನಾಲ್ವರು ಉನ್ನತ ನಾಯಕರಿಗೆ ನಿಯಂತ್ರಿತವಾಗಿರಬಾರದು ಎಂದು ಅವರು ಹೇಳಿದ್ದಾರೆ.
ಚುನಾವಣೆಯ ಬಳಿಕ ವಿಪಕ್ಷ ನಾಯಕನಾಗಿ ಮುಂದುವರಿಯುವಂತೆ ಆರ್ಎಸ್ಎಸ್ ನಾಯಕರು ಮನ ಒಲಿಸಿದ್ದರು ಎಂಬುದನ್ನು ಅಲ್ಲಗಳೆದಿರುವ ಭಾಗ್ವತ್ ಅವರು ಇದು ಆಡ್ವಾಣಿ ಅವರ ಸ್ವಂತ ನಿರ್ಧಾರವಾಗಿದೆ ಎಂದಿದ್ದಾರೆ. ಪಕ್ಷದೊಳಗಿನ ಗುಂಪುಗಾರಿಕೆ ವಿರುದ್ಧ ಆಡ್ವಾಣಿ ಅವರು ತನ್ನೊಡನೆ ಅಳಲು ತೋಡಿಕೊಂಡಿದ್ದರು ಎಂಬ ವಿಚಾರವನ್ನು ಅವರು ಈ ಸಂದರ್ಭದಲ್ಲಿ ಹೊರಗೆಡಹಿದರು. ಅವರ ಈ ಹೇಳಿಕೆಯು ಶಿಮ್ಲಾದಲ್ಲಿ ನಡೆಯಲಿರುವ ಬಿಜೆಪಿಯ ಚಿಂತನ್ ಬೈಠಕ್‌ನ ಹಿಂದಿನ ದಿನ ಹೊರಬಿದ್ದಿದೆ.
ಬಿಜೆಪಿ ಪ್ರತಿಕ್ರಿಯೆ ಭಾಗ್ವತ್ ಅವರ ಹೇಳಿಕೆಗಳಿಗೆ ಅತ್ಯಂತ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಆರ್ಎಸ್ಎಸ್ ಮುಖ್ಯಸ್ಥರ ಅಭಿಪ್ರಾಯದ ಮೇಲೆ ಅತ್ಯಂತ ಗೌರವವಿದೆ, ಆದರೆ, ನಾಯಕತ್ವದ ಕುರಿತ ನಿರ್ಧಾರವನ್ನು ಒಮ್ಮತದ ಮೂಲಕ ನಿರ್ಧರಿಸಲಾಗುವುದು ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವದ ಅವಶ್ಯಕತೆ ಇದೆ ಎಂದು ಮೂಲಗಳು ಹೇಳಿವೆಯಾದರೂ, ನಾಯಕತ್ವದ ವರ್ಗಾವಣೆಯ ಸಮಯ ಮತ್ತು ಆಯ್ಕೆಯನ್ನು ಪಕ್ಷ ನಿರ್ಧರಿಸಲಿದೆ ಎಂದು ಹೇಳಿವೆ.
ಆದರೆ ಬಿಜೆಪಿಯ ಅಭಿಪ್ರಾಯಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿರುವ ಹಿರಿಯ ಬಿಜೆಪಿ ನಾಯಕ ಮುರಳಿ ಮನೋಹರ್ ಜೋಷಿ, ಭಾಗ್ವತ್ ಅವರಿಗೆ ಪಕ್ಷಕ್ಕೆ ಸಲಹೆ ನೀಡುವ ಎಲ್ಲಾ ಹಕ್ಕಿದೆ ಮತ್ತು ಅವರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದಾರೆ.