ಇದು ನನ್ನ ಜೀವನದ ಅತ್ಯಂತ ಕೆಟ್ಟ ಹಾಗೂ ದುಃಖದ ದಿನ ಎಂಬುದಾಗಿ ಬಿಜೆಪಿಯಿಂದ ಉಚ್ಚಾನೆಗೊಂಡಿರುವ ಹಿರಿಯ ರಾಜಕಾರಣಿ ಜಸ್ವಂತ್ ಸಿಂಗ್ ಹೇಳಿದ್ದಾರೆ. ಆದರೆ ಜಿನ್ನಾ ಕುರಿತ ತನ್ನ ಪುಸ್ತಕ ಹಾಗೂ ಅದರಲ್ಲಿ ವ್ಯಕ್ತಪಡಿಸಿರುವ ಯಾವುದೇ ವಿಚಾರಗಳಿಗೆ ವಿಷಾದವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಪಕ್ಷದ ನಿರ್ಧಾರದ ಕುರಿತು ವಿಷಾದವಿದೆ ಎಂದು ಹೇಳಿದ್ದಾರೆ.
"ಪಕ್ಷದಿಂದ ತನ್ನನ್ನು ಉಚ್ಚಾಟಿಸುವ ವಿಚಾರವನ್ನು ದೆಹಲಿಯಲ್ಲೇ ತಿಳಿಸಬಹುದಿತ್ತು. ಮತ್ತು ಈ ವಿಚಾರವನ್ನು ಫೋನ್ ಮೂಲಕ ತಿಳಿಸುವ ಬದಲಿಗೆ ವೈಯಕ್ತಿಕವಾಗಿ ಹೇಳಬಹುದಿತ್ತು" ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಅವರು ಉಚ್ಚಾಟನೆಯ ಬಳಿಕ ಶಿಮ್ಲಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಪಕ್ಷಕ್ಕಾಗಿ 30 ವರ್ಷಗಳಕಾಲ ಪ್ರಾಮಾಣಿಕವಾಗಿ ದುಡಿದಿದ್ದೇನೆ ಎಂದು ಗದ್ಗದಿತರಾಗಿ ನುಡಿದ ಅವರು ಉಚ್ಚಾಟನೆಯ ಹಿಂದೆ ಆರ್ಎಸ್ಎಸ್ ಸಂಪರ್ಕದ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು. "ಇಷ್ಟು ವರ್ಷಗಳ ಕಾಲ ಪಕ್ಷಕ್ಕೆ ಹನುಮಂತನಂತೆ ಕೆಲಸ ಮಾಡಿದ್ದ ನಾನೀಗ ಪಕ್ಷಕ್ಕೆ ರಾವಣನಾಗಿದ್ದೇನೆ" ಎಂದು ವಿಷಾದಿಸಿದರು.
ಪುಸ್ತಕದಲ್ಲಿ ನಾನು ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೇವೆ ಅಷ್ಟೆ ವಿನಹ, ಇನ್ಯಾವುದೇ ಪಾಪ ಮಾಡಿಲ್ಲ ಎಂದು ಮಾಜಿ ವಿದೇಸಶಾಂಗ ಸಚಿವರು ನುಡಿದರು. ಪಕ್ಷದೊಂದಿಗಿನ ತನ್ನ ಸುದೀರ್ಘ ಕಾಲದ ಒಡನಾಟವು ದುರದೃಷ್ಟಕರವಾಗಿ ಮುಗಿಯಿತು ಎಂದ ಅವರು ಒಂದು ಕ್ಷಣ ಭಾವಾವೇಶಕ್ಕೊಳಗಾದರು.
ನನ್ನ ರಾಜಕೀಯ ಜೀವನ ಮುಗಿದೇ ಹೋಗಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು. ನಿಮ್ಮ ಮುಂದಿನ ಯೋಜನೆ ಏನು ಎಂಬ ಪ್ರಶ್ನೆಗೆ, ನೋವಿನಲ್ಲೂ ಹಾಸ್ಯಮಿಶ್ರಿತವಾಗಿ ಉತ್ತರಿಸಿದ ಅವರು ಮುಂದಿನ ವಿಮಾನ ಹಿಡಿದು ದೆಹಲಿಗೆ ತೆರಳುವುದು ಎಂದು ನುಡಿದರು.
ಇತ್ತಿಚೆಗೆ ಬಿಡುಗಡೆಗೊಂಡ ತನ್ನ ಪುಸ್ತಕದಲ್ಲಿ ಅವರು ಜಿನ್ನಾ ಒಬ್ಬ ಸಮಾಜವಾದಿ ನಾಯಕ ಹಾಗೂ ಭಾರತ ವಿಭಜನೆಗೆ ಅವರು ಜವಾಬ್ದಾರರಲ್ಲ ಎಂದು ಬರೆದಿದ್ದರು. ಅವರ ಈ ಅಭಿಪ್ರಾಯವು ಬಿಜೆಪಿಗೆ ಮುಜುಗರ ಉಂಟುಮಾಡಿದ್ದು, ಅವರನ್ನು ಶಿಮ್ಲಾದಲ್ಲಿ ನಡೆಯುತ್ತಿರುವ ಚಿಂತನ ಬೈಠಕ್‌ನಲ್ಲಿ ತೆಗೆದುಕೊಂಡಿರುವ ಪಕ್ಷದ ನಿರ್ಧಾರದನ್ವಯ, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟನೆ ಮಾಡಲಾಗಿದೆ.