ನಲ್ವತ್ತರ ಹರೆಯದ ವ್ಯಕ್ತಿಯೊಬ್ಬರು ಇಲ್ಲಿನ ಮರಾಠ್ವಾಡ ಪ್ರದೇಶದಲ್ಲಿ ಹಂದಿ ಜ್ವರಕ್ಕೆ ಬಲಿಯಾಗಿದ್ದು ಇದು ಇಲ್ಲಿ ಈ ಮಹಾಮಹಾರಿಯಿಂದ ಸಂಭವಿಸಿರುವ ಮೊದಲ ಸಾವಾಗಿದೆ. ಇವರು ಸೋಮವಾರವೇ ಸಾವನ್ನಪ್ಪಿದ್ದಾರೆ. ಅವರ ಕಫದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಮಂಗಳವಾರ ತಡರಾತ್ರಿ ಬಂದ ವರದಿಯ ಪ್ರಕಾರ ಅವರಿಗೆ ಎಚ್1ಎನ್1 ಸೋಂಕು ತಗುಲಿತ್ತು.
ನರೆಗಾಂವ್ ಗ್ರಾಮದ ಅರ್ಜುನ್ ಆರ್ ಮದುರಾಮ್ ಎಂಬವರು ಸೋಮವಾರ ಸಾವನ್ನಪ್ಪಿದ್ದಾರೆ. ಅವರ ಕಫದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಮಂಗಳವಾರ ತಡರಾತ್ರಿ ಪರೀಕ್ಷೆಯ ವರದಿ ಬಂದಿದೆ ಎಂದು ಸರ್ಕಾರಿ ವೈದ್ಯಕೀಯ ಕಾಲೇಜಿನ ವಕ್ತಾರರು ಹೇಳಿದ್ದಾರೆ.
ಇನ್ನೊಬ್ಬ ಎಂಟರ ಹರೆಯದ ಬಾಲಕನಿಗೂ ಈ ಸೋಂಕು ತಗುಲಿದ್ದು, ಆತನಿಗೂ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೋರ್ವ ವ್ಯಕ್ತಿಗೂ ಸೋಂಕು ತಗುಲಿದ್ದು ಆತ ಇನ್ನೂ ಆಸ್ಪತ್ರೆಗೆ ದಾಖಲಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ.
ಇದರಿಂದಾಗಿ ಒಟ್ಟು ಸೋಂಕು ತಗುಲಿರುವವರ ಸಂಖ್ಯೆ 12ಕ್ಕೇರಿದೆ. 1,200ಕ್ಕೂ ಹೆಚ್ಚು ರೋಗಿಗಳನ್ನು ತಪಾಸಣೆಮಾಡಲಾಗಿದ್ದು, ಇವುಗಳಲ್ಲಿ 81 ಮಂದಿಯ ವರದಿಗಳು ಬಂದಿದ್ದು, ಎಂಟು ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 47ರ ಹರೆಯ ಇನ್ನೋರ್ವ ವ್ಯಕ್ತಿಯೂ ಸಾವನ್ನಪ್ಪಿದ್ದು, ಅವರ ರಕ್ತದ ಮಾದರಿಯ ವರದಿ ಇನ್ನಷ್ಟೆ ಬರಬೇಕಿದೆ.
ಇದೇವೇಳೆ, ಭೂಮ್ ಪರಂದ ಕ್ಷೇತ್ರದ ಶಾಸಕ ರಾಹುಲ್ ಮೋಟೆ ಅವರ ಪತ್ನಿ ವೈಶಾಲಿ ಅವರಿಗೂ ಸೋಂಕು ತಗುಲಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುಣೆಗೆ ಕರೆದೊಯ್ಯಲಾಗಿದೆ.