ದೇಶದಲ್ಲಿ ಬರಗಾಲ ಪರಿಸ್ಥಿತಿ ಉದ್ಭವವಾಗಿರುವ ಹಿನ್ನೆಲೆಯಲ್ಲಿ ಮಿತವ್ಯಯ ಮಾಡಲು ಕಾಂಗ್ರೆಸಿಗರಿಗೆ ಪಕ್ಷವು ಸೂಚನೆ ನೀಡಿದೆ. ಇದರನ್ವಯ ಪಕ್ಷದ ಶಾಸಕರು, ಸಂದರು ಹಾಗೂ ಇನ್ನಿತರ ಚುನಾಯಿತ ಪ್ರತಿನಿಧಿಗಳು ಸೆ.1ರಿಂದ ಅನ್ವಯವಾಗುವಂತೆ ತಮ್ಮ ವೇತನವನ್ನು ಶೇ.20ರಷ್ಟು ಕಡಿತಗೊಳಿಸಲು ಒಪ್ಪಬೇಕು ಎಂಬುದಾಗಿ ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದಾರೆ.
ಬುಧವಾರ ನವದೆಹಲಿಯಲ್ಲಿ ನಡೆದಿರುವ ಪಕ್ಷದ ಕ್ರಿಯಾಸಮಿತಿ ಸಭೆಯಲ್ಲಿ ಸೋನಿಯಾ ಪಕ್ಷದ ಕಾರ್ಯಕರ್ತರಿಗೆ ಈ ಸೂಚನೆ ನೀಡಿದ್ದಾರೆ.
ಇದಲ್ಲದೆ, ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರು ಇನ್ನಷ್ಟು ಸಲಹೆಗಳನ್ನು ನೀಡಿದ್ದಾರೆ. ಸಚಿವರು ಅನಗತ್ಯ ವಿದೇಶ ಪ್ರವಾಸ ಮಾಡಬಾರದು. ಅನಿವಾರ್ಯ ಎಂದಾದರೆ ಪ್ರಥಮ ದರ್ಜೆ ಪ್ರಯಾಣಕ್ಕೆ ಬದಲಾಗಿ ಬಿಸ್ನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸಬೇಕು ಮತ್ತು ದೇಶದೊಳಗೆ ಪ್ರಯಾಣ ಮಾಡುವ ವೇಳೆಗೆ ಇಕಾನಮಿ ಕ್ಲಾಸಿನಲ್ಲಿ ಪ್ರಯಾಣಿಸಬೇಕು ಎಂದು ಹೇಳಿದ್ದಾರೆ.
"ನಮ್ಮ ಖಾಸಗಿ ಹಾಗೂ ಸಾರ್ವಜನಿಕ ಜೀವನದ ನಡವಳಿಕೆಗಳು ಬಡವರ್ಗದ ಮೇಲಿನ ನಮ್ಮ ಕಳವಳವನ್ನು ಪ್ರತಿಫಲಿಸುವಂತಿರಬೇಕು" ಎಂದು ಸೋನಿಯಾ ಗಾಂಧಿ ತನ್ನ ಪಕ್ಷದ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.