ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಜಸ್ವಂತ್ ಸಿಂಗ್ ಅವರ ಇತ್ತೀಚೆಗೆ ಬಿಡುಗಡೆಗೊಂಡಿರುವ 'ಜಿನ್ನಾ- ಇಂಡಿಯಾ, ಪಾರ್ಟಿಷನ್, ಇಂಡಿಪೆಂಡೆನ್ಸ್' ಪುಸ್ತಕವನ್ನು ಗುಜರಾತ್ ಸರ್ಕಾರ ನಿಷೇಧಿಸಿರುವ ಕ್ರಮಕ್ಕೆ ಪ್ರತಿಕ್ರಿಯಿಸಿರುವ ಜಸ್ವಂತ್, ಇಂದು 'ಚಿಂತನೆಯ ಮೇಲಿನ ನಿಷೇಧ'ವಾಗಿದೆ ಎಂದು ಹೇಳಿದ್ದಾರೆ.
"ಇದರಿಂದ ನನಗೆ ತುಂಬಾ ಬೇಸರವಾಗಿದೆ" ಎಂದೂ ಅವರು ಹೇಳಿದ್ದಾರೆ. "ನಾವು ಪುಸ್ತಕಗಳನ್ನು ನಿಷೇಧಿಸಲು ಆರಂಭಿಸುವ ದಿನದಿಂದ ನಾವು ಆಲೋಚನೆಯ ಮೇಲೆ ನಿಷೇಧ ಹೇರುತ್ತೇವೆ" ಎಂದು ಅವರು ಈ ಕ್ರಮವನ್ನು ಟೀಕಿಸಿದ್ದಾರೆ. ಈ ವಿವಾದಾಸ್ಪದ ಪುಸ್ತಕದಲ್ಲಿ ಪಾಕಿಸ್ತಾನ ನಾಯಕ ಮೊಹಮದ್ ಅಲಿ ಜಿನ್ನಾರನ್ನು ಹೊಗಳಿರುವುದು ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ.
ಗುಜರಾತ್ ಸರ್ಕಾರವು ಈ ಕ್ರಮ ಕೈಗೊಂಡಿರುವುದು ಸಲ್ಮಾನ್ ರಶ್ದಿ ಹಾಗೂ ಹಾಗೂ ಸೆಟಾನಿಕ್ ವರ್ಸಸ್‌ಗೆ ಇನ್ನೊಂದು ನಿದರ್ಶನ ಎಂಬುದಾಗಿ ಜಸ್ವಂತ್ ಹೇಳಿದ್ದಾರೆ.
ಪುಸ್ತಕದಲ್ಲಿ ಜಿನ್ನಾ ಕುರಿತ ಹೇಳಿಕೆಯು ಆಡ್ವಾಣಿ ಅವರು ನೀಡಿದ್ದ ಹೇಳಿಕೆಗಿಂತ ಭಿನ್ನವಾದುದು ಎಂಬ ಬಿಜೆಪಿಯ ವಾದದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾಜಿ ವಿದೇಶಾಂಗ ಸಚಿವರು, "ಮೊದಲು ನನ್ನನ್ನು ಯಾಕಾಗಿ ಉಚ್ಚಾಟಿಸಲಾಗಿದೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳಬೇಕಾಗಿದೆ. ಯೂರೂ ನನಗೆ ಕಾರಣ ತಿಳಿಸಿಲ್ಲ" ಎಂದು ಹೇಳಿದ್ದಾರೆ.
ಡಾರ್ಜಲಿಂಗ್ ಕ್ಷೇತ್ರದ ಸಂಸದರಾಗಿ ಮುಂದುವರಿಯುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ತನ್ನ ಕ್ಷೇತ್ರದ ಜನರಿಂದ ದೂರವಾಣಿ ಕರೆ ಸ್ವೀಕರಿಸಿದ್ದು, ಅಲ್ಲಿನ ಜನತೆ ತಾನು ಸಂಸದನಾಗಿ ಮುಂದುವರಿಯಬೇಕೆಂಬ ಇಚ್ಚೆ ವ್ಯಕ್ತಪಡಿಸಿದ್ದಾಗಿ ಹೇಳಿದ್ದಾರೆ.
ಜಸ್ವಂತ್ ಅವರ ಪುಸ್ತಕವು ಭಾರತದ ವಿಭಜನೆಯ ವೇಳೆ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪಾತ್ರವನ್ನು ಹಾಗೂ ಅವರ ದೇಶಭಕ್ತಿಯ ಸ್ಫೂರ್ತಿಯನ್ನು ಪ್ರಶ್ನಿಸಿದ್ದಾರೆ. ಆಧುನಿಕ ಸಂಯುಕ್ತ ಭಾರತದ ಶಿಲ್ಪಿ ಎಂದು ಪರಿಗಣಿಸಿರುವ ಪಟೇಲ್ ಅವರ ಹೆಸರಿಗೆ ಮಸಿಬಳಿಯುವ ಪ್ರಯತ್ನ ಇದಾಗಿದೆ ಎಂದು ರಾಜ್ಯ ಸರ್ಕಾರವು ಪುಸ್ತಕವನ್ನು ನಿಷೇಧಿಸಿ ನೀಡಿರುವ ಹೇಳಿಕೆಯಲ್ಲಿ ಗುಜರಾತ್ ಸರ್ಕಾರ ಅಭಿಪ್ರಾಯಿಸಿದೆ.