ಎಂಟನೆ ತರಗತಿಯ ವಿದ್ಯಾರ್ಥಿಯೊಬ್ಬ ಹೋಂವರ್ಕ್ ಮಾಡದೇ ಇದ್ದ ಕಾರಣಕ್ಕೆ, ಸಿಟ್ಟುಗೊಂಡ ಶಿಕ್ಷಕಿಯೊಬ್ಬಾಕೆ ಮೊದಲೆ ಹಾನಿಗೊಂಡಿದ್ದ ಆತನ ಕೈಯನ್ನು ತಿರುಚಿದ ಪರಿಣಾಮ ವಿದ್ಯಾರ್ಥಿ ಕೈ ಮೂಳೆ ಮುರಿದುಕೊಂಡ ಪ್ರಕರಣ ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ಬುಧವಾರ ಸಂಭವಿಸಿದೆ.
ಹೋಲಿಹಾರ್ಟ್ ಶಾಲೆಯ ಜಸ್‌ದೀಪ್ ಸಿಂಗ್ ಚಾಹಲ್ ಕೈಮೂಳೆ ಮುರಿದುಕೊಂಡಿರುವ ದುರ್ದೈವಿ ವಿದ್ಯಾರ್ಥಿಯಾಗಿದ್ದಾನೆ. ತಾನು ಹೋಂವರ್ಕ್ ಮಾಡಿಲ್ಲವೆಂದು ಶಿಕ್ಷಕಿ ತನ್ನ ಕೈ ತಿರುಚಿದಾಗಿ ಈತ ಹೇಳಿಕೊಂಡಿದ್ದಾನೆ.
ನಾಲ್ಕು ತಿಂಗಳ ಹಿಂದೆ ಕೈ ಮೂಳೆ ಮರಿತಕ್ಕೊಳಗಾಗಿದ್ದ ಈತ ಕೈಗೆ ಪ್ಲಾಸ್ಟರ್ ಹಾಕಿಸಿಕೊಂಡಿದ್ದು, ಇತ್ತೀಚೆಗಷ್ಟೆ ಅದನ್ನು ತೆಗೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಕೈಗೆ ಹೊಡೆಯದಂತೆ ಆತ ವಿನಂತಿಸಿಕೊಂಡರೂ, ಶಿಕ್ಷಕಿ ಕೈಯನ್ನು ತಿರುಚಿದರು ಎಂದು ದೂರಲಾಗಿದೆ. ಇದಾದ ಬಳಿಕ ತರಗತಿಯಿಂದ ಹೊರಹೋಗದಂತೆ ತಡೆದು ಡೆಸ್ಕ್ ಮೇಲೆ ನಿಲ್ಲುವಂತೆ ಹೇಳಿದ್ದು, ಮನೆಗೆ ಫೋನ್ ಮಾಡಲೂ ಅವಕಾಶ ನೀಡಲಿಲ್ಲ ಎಂದು ವಿದ್ಯಾರ್ಥಿ ದೂರಿದ್ದಾನೆ.
ಶಾಲೆಯಿಂದ ಮನೆಗೆ ಬಂದ ಬಳಿಕ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಲ್ಲಿ ಕೈ ಮೂಳೆ ಮುರಿದಿರುವುದನ್ನು ದೃಢಪಡಿಸಲಾಗಿದೆ ಎಂದು ವಿದ್ಯಾರ್ಥಿಯ ಪೊಷಕರು ತಿಳಿಸಿದ್ದಾರೆ.
ಬೇಜವಾಬ್ದಾರಿಯಿಂದ ಮತ್ತು ಅಮಾನವೀಯವಾಗಿ ವರ್ತಿಸಿರುವ ಶಿಕ್ಷಕಿಯನ್ನು ಶಾಲೆಯಿಂದ ವಜಾ ಮಾಡಲಾಗುವುದು ಮತ್ತು ವಿದ್ಯಾರ್ಥಿಗೆ ಪರಿಹಾರ ನೀಡುವುದಾಗಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ಸೇಥ್ ತಿಳಿಸಿದ್ದಾರೆ.