ಇದೊಂದು ಸಿನೀಮಿಯ ಘಟನೆಯಂತೆ ಕಾಣುತ್ತಿದೆ. ಇಲ್ಲೊಬ್ಬ ಬಾಲಕಿಯನ್ನು ಆತನ ಅಣ್ಣನೇ ಮಾರಟ ಮಾಡಿದ್ದಾನೆ. ಆದರೆ ತಾಯಿ ಮಾತ್ರ ತನ್ನ ಮಗಳ ಹುಡುಕಾಟಕ್ಕಿಳಿದು, ಮಗಳನ್ನು ಮರಳಿ ಮನೆಗೆ ತರಲು ಹೋರಾಟಕ್ಕಿಳಿದಿದ್ದಾಳೆ.
ಸಾಬರ್‌ಮತಿ ನಿವಾಸಿಯಾಗಿರುವ ನಬುಬೆನ್ ಭಾಬೋರ್ ಎಂಬಾಕೆ ತನ್ನ ಮಗನು, ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಇನ್ನೊಬ್ಬ ಅಪ್ರಾಪ್ತನಿಗೆ 25 ಸಾವಿರ ರೂಪಾಯಿಗೆ ಮಾರಿರುವುದಾಗಿ ದೂರಿದ್ದಾಳೆ. ಆರೋಪಿ ಅಪ್ರಾಪ್ತನೊಂದಿಗೆ ತೆರಳಲು ತನ್ನ ಪುತ್ರಿಯನ್ನು ಪುಸಲಾಯಿಸಲಾಗಿತ್ತು. ಬಳಿಕ ಅಪ್ರಾಪ್ತನು ಆತನ ಮನೆಯಲ್ಲಿ ಆತನ ಹೆತ್ತವರು ನಿದ್ರಿಸಿದ್ದಾಗ ತನ್ನ ಮಗಳನ್ನು ದೈಹಿಕ ಸಂಬಂಧಕ್ಕಾಗಿ ಒತ್ತಾಯಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ತಾನು ದಿನಗೂಲಿಗೆ ತೆರಳಿದ್ದು ಮರಳಿದ ವೇಲೆ ಮಗಳು ಕಾಣುತ್ತಿರಲಿಲ್ಲ. ಎಲ್ಲೆಡೆ ಹುಡುಕಿದರೂ ಮಗಳು ಪತ್ತೆಯಾಗಿರಲಿಲ್ಲ. ಆಕೆ ತನ್ನ ಪುತ್ರ ಕಲಾಭಾಯ್ ಭಹಾದೂರ್ ಹಾಗೂ ಆರೋಪಿಯ ಚಿಕ್ಕಮ್ಮ ನಬುಬೆನ್ ಮಕೋದಿಯಾಳನ್ನು ಪ್ರಶ್ನಿಸಿದ್ದಳು. ಆದರೆ ತಾವ್ಯಾರೂ ಆಕೆಯನ್ನು ನೋಡಲೇ ಇಲ್ಲವೆಂದು ಎಲ್ಲರೂ ಹೇಳಿದ್ದರು.
ಇದರಿಂದ ಚಿಂತಿತಳಾದ ತಾಯಿ ಪೊಲೀಸ್ ದೂರು ನೀಡಲು ಪುತ್ರನನ್ನು ಒತ್ತಾಯಿಸಿದಾಗ ಬೆದರಿದ ಕಲಾಭಾಯ್ ತನ್ನ ತಂಗಿಯನ್ನು ಮಾರಿರುವುದಾಗಿ ಹೇಳಿದ್ದಾನೆ. ಇತರ ಮೂವರರೊಂದಿಗೆ ಆರೋಪಿಯು ಜೀಪಿನಲ್ಲಿ ಬಂದಿದ್ದು, ತಂಗಿಯನ್ನು ಕರೆದೊಯ್ದಿರುವುದಾಗಿ ತಿಳಿಸಿದ. ಅಲ್ಲದೆ ಪೊಲೀಸರಿಗೆ ಈ ವಿಚಾರ ತಿಳಿಸದಂತೆ 25 ಸಾವಿರವನ್ನು ನೀಡುವುದಾಗಿ ಆಮಿಷ ಒಡ್ಡಿದ. ಆದರೆ ಹಣ ಸ್ವೀಕರಿಸಲು ಒಪ್ಪದ ಆಕೆ ತನ್ನ ಮಗಳನ್ನು ಮರಳಿ ಮನೆಗೆ ಕರೆತರಲು ಕ್ರಮಕೈಗೊಳ್ಳಲು ಮುಂದಾಗಿದ್ದಳು.
ತನ್ನ ಪುತ್ರ, ಆರೋಪಿಯ ಚಿಕ್ಕಮ್ಮ, ಜೀಪು ಚಾಲಕ ಹಾಗೂ ಆರೋಪಿಯ ಹೆತ್ತವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಭಾಬೋರ್ ಡಿಸಿಪಿಯವರಿಗೆ ದೂರು ನೀಡಿದ್ದಾಳೆ. ಅಲ್ಲದೆ ತನ್ನ ದೂರಿನಲ್ಲಿ ಸಾಬರ್ಮತಿ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದೂ ದೂರಿದ್ದಾಳೆ.
ಆರೋಪಿ ಹುಡುಗ ಈ ಹಿಂದೆಯೂ ಬಂಧನಕ್ಕೀಡಾಗಿದ್ದು, ಆತನನ್ನು ಬಾಲಾಪರಾಧಿಗಳ ನ್ಯಾಯಾಲಯ ಜಾಮೀನು ಮೇಲೆ ಬಿಡುಗಡೆ ಮಾಡಿತ್ತು. ಈತ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಾನೆ ಎಂದೂ ದೂರಿನಲ್ಲಿ ಆಪಾದಿಸಲಾಗಿದೆ.
ಈ ಕುರಿತು ಸೂಕ್ತ ಕ್ರಮಕೈಗೊಳ್ಳುವುದಾಗಿ ಡಿಸಿಪಿ ಎಸ್.ಎಂ ಕತಾರ ಹೇಳಿದ್ದಾರೆ.