ಬಹಮಾಸ್‌ನಲ್ಲಿ ನಡೆಯುತ್ತಿರುವ ಮಿಸ್ ಯೂನಿವರ್ಸ್ ಸ್ಫರ್ಧೆಯ ಸ್ಫರ್ಧಾಳುವಾಗಿರುವ ಮಿಸ್ ಇಂಡಿಯಾ ಏಕ್ತಾ ಕಪೂರ್ ಅವರ ಹೆತ್ತವರಿಗೆ ಅಂತಿಮ ಸ್ಫರ್ಧೆಇರುವ ಆಗಸ್ಟ್ 23ರಂದು ಅಲ್ಲಿಗೆ ತೆರಳುವ ಇಚ್ಛೆ. ಆದರೆ ಸ್ಥಳೀಯ ಗೂಂಡಾಗಳ ಉಪಟಳ ಇವರ ಆಸೆಗೆ ತಣ್ಣೀರೆರೆಚಿದ್ದು ಅವರು ಮನೆ ಬಿಟ್ಟು ತೆರಳಲು ಹೆದರುವ ಪರಿಸ್ಥಿತಿ ಉಂಟಾಗಿದೆ.
ತಮ್ಮ ಅನುಪಸ್ಥಿತಿಯಲ್ಲಿ ಮನೆಯಲ್ಲಿ ಕಳ್ಳತನವಾಗಬಹುದು ಎಂಬುದು ಏಕ್ತಾ ಹೆತ್ತವರ ಭೀತಿಯಾಗಿದೆ. ಅವರು ಈ ಕುರಿತು ಪೊಲೀಸರಲ್ಲಿ ದೂರು ನೀಡಿರುವುದಾಗಿಯೂ ಹೇಳಿದ್ದಾರೆ.
ಇವರ ಮನೆಯ ಪಕ್ಕದಲ್ಲಿರುವ ಗೂಡಂಗಡಿಯಲ್ಲಿ ಕುಳಿತಿರುವ ಪಡ್ಡೆಗಳಿಗೆ ಹಾದಿಬೀದಿಲಿ ಹೋಗೋರನ್ನು ಚುಡಾಯಿಸುವುದೇ ಕೆಲಸವಾಗಿದೆ. ಅಂಗಡಿಯಲ್ಲೇ ಇಡೀದಿನ ಕುಳಿತಿರುವ ಕಾಲಿಪೋಲಿಗಳು ಕೆಳಮಟ್ಟದ ಮಾತುಗಳನ್ನು ಆಡುತ್ತಾ ಇರುತ್ತಾರೆ. ಇವರ ಬಗ್ಗೆ ಒಮ್ಮೆ ದೂರುನೀಡಿದ್ದು, ಒಮ್ಮೆ ಈ ಚಹದ ಅಂಗಡಿ ಮುಚ್ಚುವಂತಾದ ಮೇಲೆ ಇವರ ಉಪಟಳ ಮತ್ತಷ್ಟು ಹೆಚ್ಚಿದೆ ಎಂದು ಏಕ್ತಾ ತಾಯಿ ದೂರುತ್ತಾರೆ.
ನಾವು ಈ ವಿಷಯ ಏಕ್ತಾಳಿಗೆ ತಿಳಿಸಿದ್ದೇವೆ. ಆಕೆ ಮಿಸ್ ಯೂನಿವರ್ಸ್ ಕಿರೀಟ ಗೆಲ್ಲಲಿ ಎಂಬುದಾಗಿ ಇಲ್ಲಿಂದಲೇ ಹಾರೈಸುತ್ತೇವೆ ಎನ್ನುತ್ತಾರೆ ಅವರು. ಆಕೆ ಸ್ಫರ್ಧೆಯ ತೀರ್ಪುಗಾರರ ಪ್ರಶ್ನೆಗಳಿಗೆಲ್ಲ ಉತ್ತಮ ಉತ್ತರ ನೀಡಿದ್ದು, ಗೆಲುವಿನ ನಿರೀಕ್ಷೆಯಲ್ಲಿದ್ದಾಳೆ ಎಂಬುದು ಅವರ ವಿಶ್ವಾಸವಾಗಿದೆ.