ಬಿಜೆಪಿ ಅಧಿಕಾರದಲ್ಲಿದ್ದಾಗ ರಕ್ಷಣೆ, ಹಣಕಾಸು ಹಾಗೂ ವಿದೇಶಾಂಗ ಸಚವಾಲಯದ ಅಧಿಕಾರ ಹೊಂದಿದ್ದು, ಸುಮಾರು 30 ವರ್ಷಗಳ ಒಡನಾಟದ ಬಳಿಕ ಜಸ್ವಂತ್ ಸಿಂಗ್ ಅವರನ್ನು ಪಕ್ಷದಿಂದ ಉಚ್ಚಾಟಿಸಲ್ಪಟ್ಟಿರುವ ಹಿಂದಿನ ನಿಜವಾದ ಕಾರಣವೇನು?
ಜಸ್ವಂತ್ ಉಚ್ಚಾಟನೆಗೆ ಜಿನ್ನಾರನ್ನು ತಮ್ಮ ಪುಸ್ತಕದಲ್ಲಿ ಹೊಗಳಿರುವುದು ಕಾರಣ ಎಂದು ಮೇಲ್ನೋಟಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದರೂ, ಅವರ ವಿರುದ್ಧ ಪಕ್ಷದಲ್ಲಿ ಅಸಮಾಧಾನ ಹೊಗೆಯಾಡುತ್ತಿದ್ದುದು ಯಾರಿಗೂ ಗೊತ್ತಿರದ ವಿಚಾರವಲ್ಲ. ಲೋಕಸಭಾ ಚುನಾವಣೆಯ ಸೋಲಿನ ಬಳಿಕದ ವಿದ್ಯಮಾನಗಳನ್ನು ಟೀಕಿಸಿದ್ದ ಅವರು ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ಪಕ್ಷದಲ್ಲಿ ಪುರಸ್ಕಾರ ಮತ್ತು ಫಲಿತಾಂಶಕ್ಕೆ ಸಂಬಂಧವಿರ ಬೇಕು ಎಂದು ಪ್ರತಿಪಾದಿಸಿದ್ದರು.
ಇವರ ಈ ಹೇಳಿಕೆಗೆ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರು, ಲೋಕಸಭೆಯಲ್ಲಿ ಸೋತವರನ್ನು ರಾಜ್ಯಸಭೆಗೆ ಕಳುಹಿಸಿ ಸಚಿವರನ್ನಾಗಿಸಿದವರು ಫಲಿತಾಂಶ ಮತ್ತು ಪ್ರತಿಫಲದ ಬಗ್ಗೆ ಮಾತನಾಡುತ್ತಾರೆ ಎಂದಿದ್ದರು. ಜಸ್ವಂತ್ ಅವರು 1998ರ ಲೋಕಸಭಾ ಚುನಾವಣೆಯಲ್ಲಿ ಚಿತ್ತೋರ್‌ಗಢದಲ್ಲಿ ಸೋಲನ್ನಪ್ಪಿದ್ದನ್ನು ಉದ್ದೇಶಿಸಿ ಈ ಟೀಕೆ ಮಾಡಿದ್ದರು. ಆ ಸರ್ತಿ 177 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಮಿತ್ರಪಕ್ಷಗಳ ನೆರವಿನಿಂದ 250 ಸಂಖ್ಯೆಗೇರುವಲ್ಲಿ ಯಶಸ್ವಿಯಾಗಿತ್ತು.
ಶಿಮ್ಲಾ ಬೈಠಕ್ ಮುಂಚಿತವಾಗಿ ಜಸ್ವಂತ್ ವಿರುದ್ಧ ಇಷ್ಟು ಕಠಿಣವಾದ ಕ್ರಮಕೈಗೊಳ್ಳಬಹುದೆಂದು ನಿರೀಕ್ಷಿಸಿರಲಿಲ್ಲ. ಬಿಜೆಪಿ ಸಂಸದೀಯ ಮಂಡಳಿಯಲ್ಲಿದ್ದ ಜಸ್ವಂತ್ ಅವರನ್ನು ಮಂಡಳಿಯಿಂದ ಕೈಬಿಡಬಹುದು ಎಂಬುದಾಗಿ ನಿರೀಕ್ಷಿಸಲಾಗಿತ್ತು. ಆದರೆ ಸಭೆಸೇರುತ್ತಲೇ ಈ ವಿಚಾರ ಪ್ರಸ್ತಾಪವಾಗಿದ್ದು, ಕೆಲವೇ ಕ್ಷಣದಲ್ಲಿ ಅವರನ್ನು ಉಚ್ಚಾಟಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.
ಈ ಮಧ್ಯೆ ಜಸ್ವಂತ್ ಉಚ್ಚಾಟನೆಗೆ ಜಿನ್ನಾ ಮೇಲಿನ ಹೇಳಿಕೆ ಕಾರಣವಲ್ಲ, ಬದಲಿಗೆ ಪಟೇಲ್ ವಿರುದ್ಧದ ಹೇಳಿಕೆ ಕಾರಣ ಎಂದು ಬಿಜೆಪಿ ಹೇಳಿದೆ. ಜಸ್ವಂತ್ ಅವರ ಪುಸ್ತಕದಲ್ಲಿ ವಲ್ಲಭಭಾಯ್ ಪಟೇಲರ ದೇಶಭಕ್ತಿಯನ್ನು ಸಂಶಯಿಸಿದ್ದು, ಅವರ ಪ್ರತಿಷ್ಠೆಗೆ ಧಕ್ಕೆಯಾಗುವಂತೆ ಬಿಂಬಿಸಲಾಗಿದೆ ಎಂದು ಬಿಜೆಪಿ ದೂರಿದೆ.