ವರುಣ್ ಗಾಂಧಿ ಉದ್ರೇಕಕಾರಿ ಭಾಷಣ, ನರೇಂದ್ರ ಮೋದಿ ಅವರನ್ನು ಭಾರತದ ಭವಿಷ್ಯದ ಪ್ರಧಾನಿ ಎಂಬುದಾಗಿ ಬಿಂಬಿಸಿದ್ದು, ಮನಮೋಹನ್ ಸಿಂಗ್ ಅವರನ್ನು ದುರ್ಬಲ ಎಂಬುದಾಗಿ ವೈಯಕ್ತಿಕವಾಗಿ ದೂಷಿಸಿದ್ದು, ಇವುಗಳು ಇತ್ತೀಚೆಗಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲು ಕಾಣಲು ಕಾರಣ ಎಂಬುದಾಗಿ ಪಟ್ಟಿ ಮಾಡಲಾಗಿದೆ.
ಇದಲ್ಲದೆ, ಮತದಾರರನ್ನು ತಲುಪದ ತಪ್ಪು ಘೋಷ ವಾಕ್ಯಗಳೂ ಸೋಲಿಗೆ ಕಾರಣವಾಗಿದೆ ಎಂಬುದಾಗಿ ಬಾಳ್ ಅಪ್ಟೆ ನೇತೃತ್ವದ ತ್ರಿಸದಸ್ಯ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಹೇಳಲಾಗಿದೆ. ಶಿಮ್ಲಾದಲ್ಲಿ ನಡೆಯುತ್ತಿರುವ ಮುಚ್ಚಿದ ಬಾಗಿಲಿನ ಚಿಂತನ್ ಬೈಠಕ್‌ನಲ್ಲಿ ಈ ವರದಿಯನ್ನು ಸಲ್ಲಿಸಲಾಗಿದೆ. ಲೋಕಸಭಾ ಚುನಾವಣೆ ಸೋಲಿಗೆ ಇದಲ್ಲದೆ ಇನ್ನೂ ಹಲವು ಕಾರಣಗಳಿವೆ ಎಂಬುದಾಗಿ ವರದಿಯಲ್ಲಿ ಹೇಳಲಾಗಿದೆ.
ವರದಿಯಲ್ಲಿರುವ ಇತರ ಕಾರಣಗಳೆಂದರೆ, * ಪಕ್ಷದ ನಾಯಕರಲ್ಲಿ ಒಗ್ಗಟ್ಟಿನ ಕೊರತೆ. * ಯುವ ಜನರನ್ನು ಸಂಪರ್ಕಿಸುವಲ್ಲಿ ವೈಫಲ್ಯ. * 26/11ರ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮೇಲೆ ದಾಳಿ ನಡೆಸಲು ವೈಫಲ್ಯ. ಬದಲಾಗಿ ಕಾಂಗ್ರೆಸ್ ಮತ್ತು ಮಾಧ್ಯಮಗಳು ವಿಷಯವನ್ನು ಬದಲಿಸಿ ಕಾಂಧಾರ್ ವಿಚಾರವನ್ನು ತಂದು ಅದನ್ನೇ ಎದ್ದುಗಾಣಿಸುವಂತೆ ಮಾಡಿದಾಗ ಸಮರ್ಥವಾಗಿ ಎದುರಿಸಲಾಗದೇ ಹೋದದ್ದು. * ಪಕ್ಷದ ಚುನಾವಣಾ ಘೋಷಣೆಗಳ ವೈಫಲ್ಯ. * ವರುಣ್ ಗಾಂಧಿಯ ಹಗೆ ಭಾಷಣವೂ ಸೋಲಿಗೆ ಕೊಡುಗೆ ನೀಡಿದೆ. * ನರೇಂದ್ರ ಮೋದಿ ಆವರನ್ನು ಭವಿಷ್ಯದ ಪ್ರಧಾನಿ ಎಂಬುದಾಗಿ ಬಿಂಬಿಸಿರುವುದು ಪಕ್ಷದ ಅಭ್ಯುದಯಕ್ಕೆ ಹಾನಿಯುಂಟುಮಾಡಿದೆ. * ಪ್ರಚಾರವನ್ನು ಇನ್ನಷ್ಟು ಎಚ್ಚರಿಕೆಯಿಂದ, ಏಕಕಾಲಕ್ಕೆ, ಪರಿಣಾಮಕಾರಿಯಾಗಿ ಮಾಡಬೇಕಿತ್ತು. * ಮನಮೋಹನ್ ಸಿಂಗ್ ಮೇಲಿನ ವೈಯಕ್ತಿಕ ದಾಳಿ ಜನರಿಗೆ ಪಥ್ಯವಾಗಿಲ್ಲ. * ಪಂಜಾಬಿನಲ್ಲಿ ಮಿತ್ರಪಕ್ಷಗಳ ಮನೋಭಾವ ಎನ್‌ಡಿಎ ಮೈತ್ರಿಕೂಟದ ಕಾರ್ಯಕ್ಷಮತೆಗೆ ಅಡ್ಡಿಯಾಯಿತು. * ದೆಹಲಿಯಲ್ಲಿ ಆಟ ಆರಂಭವಾಗುವ ಮುನ್ನವೇ ಪಕ್ಷ ಸೋತಿತು. * ಹರ್ಯಾಣದಲ್ಲಿ ಜನಪ್ರಿಯತೆಯನ್ನು ಗಳಿಸಲು ಸೋತಿರುವುದು. * ಕೊನೆಗಳಿಗೆಯಲ್ಲಿ ಒರಿಸ್ಸಾದಲ್ಲಿ ಬಿಜೆಡಿಯೊಂದಿಗಿನ ಒಡಕು.
ಇವುಗಳೆಲ್ಲ ಬಿಜೆಪಿಯ ಸೋಲಿಗೆ ಕಾರಣ ಎಂದು ವರದಿಯಲ್ಲಿ ಪಟ್ಟಿ ಮಾಡಲಾಗಿದೆ.