ಎಚ್1ಎನ್1: ದೆಹಲಿಯಲ್ಲಿ ಹೊಸದೆರಡು, ಬೆಂಗ್ಳೂರಲ್ಲಿ ಮತ್ತೆರಡು
ನವದೆಹಲಿ, ಗುರುವಾರ, 20 ಆಗಸ್ಟ್ 2009( 19:40 IST )
ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಮೊದಲ ಬಾರಿಗೆ ಹಂದಿಜ್ವರಕ್ಕೆ ಇಬ್ಬರು ಬಲಿಯಾಗಿದ್ದಾರೆ. 31ರ ಹರೆಯದ ಓರ್ವ ಪುರುಷ ಹಾಗೂ 38ರ ಹರೆಯದ ಓರ್ವ ಮಹಿಳೆ ಗುರುವಾರ ಸಾವನ್ನಪ್ಪಿದ್ದು, ಇವರಿಗೆ ಹಂದಿಜ್ವರ ಸೋಂಕು ತಗುಲಿರುವುದು ದೃಢಪಟ್ಟಿದೆ.
ರೇಣು ಗುಪ್ತಾ ಎಂಬಾಕೆ ಬುಧವಾರ ರಾತ್ರಿ ಸಾವನ್ನಪ್ಪಿದ್ದರೆ, ಸಾಮ್ರಾಟ್ ಪಾಂಡ್ಯ ಎಂಬವರು ಗುರುವಾರ ಮುಂಜಾನೆ ಸಾವನ್ನಪ್ಪಿದ್ದಾರೆ ಎಂಬುದಾಗಿ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಎನ್.ಕೆ. ಚತುರ್ವೇದಿ ಹೇಳಿದ್ದಾರೆ. ಈ ಇಬ್ಬರಿಗೂ ಹಂದಿಜ್ವರದ ಸೋಂಕು ತಗುಲಿದ್ದು, ಇಬ್ಬರೂ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮೃತ ಸಾಮ್ರಾಟ್ ಅವರು ಪಕ್ಕದ ಗುರ್ಗಾಂವ್ ನಿವಾಸಿಯಾಗಿದ್ದು ಆಗಸ್ಟ್ 14ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ ಸೂಕ್ತ ಚಿಕಿತ್ಸೆ ಲಭಿಸದೇ ಇರುವುದೇ ಅವರು ಸಾವನ್ನಪ್ಪಲು ಕಾರಣ ಎಂಬುದಾಗಿ ಅವರ ತಂದೆ ಆರ್.ಪಿ. ಪಾಂಡೇಯ ದೂರಿದ್ದಾರೆ. ಈ ಇಬ್ಬರಿಗೂ ವೈರಸ್ ಸೋಂಕಿದ ಬಳಿಕ ಐದು ದಿನಗಳ ಕಾಲ ಚಿಕಿತ್ಸೆ ನೀಡಿರಲಿಲ್ಲ ಎಂಬುದಾಗಿ ಅವರು ಆರೋಪಿಸಿದ್ದಾರೆ. ಆದರೆ ಅವರ ಆರೋಪವನ್ನು ಚರ್ತುವೇದಿ ಅವರು ತಳ್ಳಿಹಾಕಿದ್ದಾರೆ.
ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಇರಲಿಲ್ಲ. ಆಕ್ಸಿಜನ್ ಸಿಲಿಂಡರ್‌ಗಳು ಖಾಲಿ ಇದ್ದವು. ಇಂದಿನ ತನಕ ಆಸ್ಪತ್ರೆಯು ವರದಿಗಳನ್ನು ಬಹಿರಂಗ ಪಡಿಸಿಲ್ಲ ಎಂದೂ ಸಾಮ್ರಾಟ್ ಅವರ ತಂದೆ ದೂರಿದ್ದಾರೆ.
ಆದರೆ, ಇವೆಲ್ಲ ನಿರಾಧಾರ ಎಂದಿರುವ ಚತುರ್ವೇದಿ ಅವರು ಸರ್ಕಾರವು ಚಿಕಿತ್ಸೆಗಾಗಿ ಈ ಆಸ್ಪತ್ರೆಯನ್ನು ಗುರುತಿಸಿದೆ. ಆಸ್ಪತ್ರೆಯಲ್ಲಿ ಸೌಲಭ್ಯಗಳಿಲ್ಲದಿದ್ದರೆ ಇಷ್ಟು ದಿನ ಚಿಕಿತ್ಸೆ ನೀಡಲು ಸಾಧ್ಯವಿತ್ತೇ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮತ್ತೆರಡು ಸಾವು ಇದೇವೇಳೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೂ ಮತ್ತಿಬ್ಬರು ಈ ರೋಗದಿಂದಾಗಿ ಪ್ರಾಣತೆತ್ತಿದ್ದಾರೆ. ಕೊಲಂಬಿಯಾ ಏಶ್ಯಾ ಆಸ್ಪತ್ರೆಯಲ್ಲಿ ಒಬ್ಬರು ಹಾಗೂ ವೈದೇಹಿ ಆಸ್ಪತ್ರೆಯಲ್ಲಿ ಒಬ್ಬರು ಸೇರಿದಂತೆ ಇಬ್ಬರು ಗರುವಾರ ಈ ಮಹಾಮಾರಿಗೆ ಬಲಿಯಾಗಿಗ್ದು, ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಒಟ್ಟು ಒಂಬತ್ತಕ್ಕೇರಿದೆ.