ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಬುರ್ಖಾ' ಇಸ್ಲಾಂ ಭಾಗವಲ್ಲ, ಸಂಸ್ಕೃತಿಯಷ್ಟೇ: ಮತ ಪಂಡಿತರು (Bantwal SVS College | Burqa | Islam | Dress Code | Karnataka)
'ಬುರ್ಖಾ' ಇಸ್ಲಾಂ ಭಾಗವಲ್ಲ, ಸಂಸ್ಕೃತಿಯಷ್ಟೇ: ಮತ ಪಂಡಿತರು
ನವದೆಹಲಿ, ಗುರುವಾರ, 20 ಆಗಸ್ಟ್ 2009( 20:38 IST )
ಬುರ್ಖಾ ಅಥವಾ ಹೆಡ್‌ಸ್ಕಾರ್ಫ್ ತೊಡಲು ಅವಕಾಶ ನೀಡದಿರುವ ಬಂಟ್ವಾಳದ ಕಾಲೇಜಿಗೆ ಅನಿರೀಕ್ಷಿತ ವಲಯದಿಂದ ಬೆಂಬಲ ಸಿಕ್ಕಿದೆ. ಇಸ್ಲಾಮ್ ಧರ್ಮವು ಯಾವುದೇ ವಸ್ತ್ರ ಸಂಹಿತೆ ಹೇರುವ ಕುರಿತು ಯಾವುದೇ ನಿರ್ದಿಷ್ಟ ನಿಯಮಗಳನ್ನು ಹೊಂದಿಲ್ಲ. ಹೀಗಾಗಿ ಕಾಲೇಜಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದಿದ್ದಾರೆ ಇಸ್ಲಾಮಿಕ್ ಮತ ಪಂಡಿತರು.
'ಬುರ್ಖಾ ಎಂಬುದು ಇಸ್ಲಾಂನ ಭಾಗವಲ್ಲ. ಇದೊಂದು ಸಂಸ್ಕೃತಿಯ ಭಾಗ. ಈ ಸಂಸ್ಕೃತಿಯನ್ನು ಉಪಖಂಡದ ಜನ ಅನಾದಿ ಕಾಲದಿಂದಲೂ ಅನುಸರಿಸುತ್ತಾ ಬಂದಿದ್ದಾರೆ. ಇಸ್ಲಾಂ ಹೆಸರಲ್ಲಿ ಯಾರು ಕೂಡ ವಸ್ತ್ರ ಸಂಹಿತೆಯನ್ನು ಹೇರಲಾಗದು. ಈ ರೀತಿ ಮಾಡುವುದು ಖಂಡಿತಾ ಇಸ್ಲಾಂ-ವಿರೋಧಿ' ಎಂದು ಖ್ಯಾತ ಇಸ್ಲಾಂ ವಿದ್ವಾಂಸರಾದ ಮೌಲಾನಾ ವಹಿಯುದ್ದೀನ್ ಖಾನ್ ಹೇಳಿದ್ದಾರೆ.
ಬುರ್ಖಾ ಅಥವಾ ಸ್ಕಾರ್ಫ್ ಧರಿಸಬಾರದು ಎಂದು ಕಾಲೇಜೊಂದು ನಿಯಮ ರೂಪಿಸಿದ್ದರೆ, ಕಲಿಯಲೆಂದು ಬರುವ ವಿದ್ಯಾರ್ಥಿಗಳು ಅದನ್ನು ಅನುಸರಿಸಬೇಕು ಮತ್ತು ಗೌರವಿಸಬೇಕು. ನಿಮಗೆ ಇಷ್ಟವಿಲ್ಲವಾದರೆ, ಕಾಲೇಜನ್ನೇ ತೊರೆಯಬೇಕು ಎಂದು ಈಗಾಗಲೇ 10 ಪುಸ್ತಕಗಳನ್ನು ಬರೆದಿರುವ 82ರ ಹರೆಯದ ಮೌಲಾನಾ ಹೇಳಿದ್ದಾರೆ.
ಸ್ಕಾರ್ಫ್ ತೊಟ್ಟೇ ಕಾಲೇಜಿಗೆ ಬರುವುದಾಗಿ ತಗಾದೆ ಮಾಡಿದ 19ರ ಹರೆಯದ ಆಯೇಷಾ ಆಸ್ಮಿನ್ ಎಂಬಾಕೆಗೆ, ಅದಕ್ಕೆ ಅವಕಾಶ ನೀಡದೆ ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು ಸುದ್ದಿಗೆ ಗ್ರಾಸವಾಗಿತ್ತು. ಧರ್ಮದ ಆಧಾರದಲ್ಲಿ ನನ್ನನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಆಯೇಷಾ ವಾದಿಸಿದ್ದರೆ, ಈ ಆರೋಪ ನಿರಾಕರಿಸಿರುವ ಕಾಲೇಜು ಆಡಳಿತ ಮಂಡಳಿಯು, ಆಕೆ ಕಾಲೇಜಿನ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾಳೆ ಎಂದು ಪ್ರತಿಕ್ರಿಯಿಸಿತ್ತು.
ಆಂತರಿಕ ಗುಣವೇ ಇಸ್ಲಾಮಿನ ಉಡುಗೆ ಸಂಹಿತೆಯೇ ಹೊರತು, ಹೊರಗೆ ಏನು ತೊಡುತ್ತೀರಿ ಎಂಬುದಲ್ಲ ಎಂದಿರುವ ಅವರು, 'ಪುರುಷ ಅಥವಾ ಸ್ತ್ರೀ, ತಮಗೆ ಸಭ್ಯ ಎಂದು ಕಾಣುವ ಯಾವುದನ್ನೇ ಆದರೂ ತೊಡಬಹುದಾಗಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿರುವುದು ನಮ್ಮ ಗುಣದಲ್ಲಿನ ಸತ್ಯವಿಶ್ವಾಸ ಮತ್ತು ಪ್ರಾಮಾಣಿಕತೆ' ಎಂದು "ಡಿಸ್ಕವರಿಂಗ್ ಇಸ್ಲಾಮ್ ಫ್ರಂ ಇಟ್ಸ್ ಒರಿಜಿನಲ್ ಸೋರ್ಸ್" ಎಂಬ ಪುಸ್ತಕ ಬರೆದಿರುವ ಖಾನ್ ಹೇಳಿದ್ದಾರೆ. ಈ ಪುಸ್ತಕದಲ್ಲಿ ಪ್ರವಾದಿ ಮಹಮದ್ ಮಂಡಿಸಿದ ಇಸ್ಲಾಮ್ ಮತ್ತು ಆಧುನಿಕ ಯುಗದ ಇಸ್ಲಾಂ ನಡುವೆ ತುಲನೆ ಮಾಡಲಾಗಿದೆ.
ಇಸ್ಲಾಮಿಕ್ ವಿದ್ವಾಂಸರಾಗಿರುವ ಮತ್ತು ರಾಜಧಾನಿ ದೆಹಲಿಯ ಜಾಮಿಯಾ ಮಿಲಿಯಾ ವಿವಿಯಲ್ಲಿ ಬೋಧಕರೂ ಆಗಿರುವ ಫರೀದಾ ಖಾನ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
"ಬುರ್ಖಾ ಎಂಬುದು ನಿಷ್ಠುರತೆಯ ಸಂಕೇತವೇ ಹೊರತು, ಇಸ್ಲಾಂಗೂ ಅದಕ್ಕೂ ಬೇರಾವುದೇ ಸಂಬಂಧವಿಲ್ಲ. ಉಪಖಂಡದ ಸಂಸ್ಕೃತಿಯ ಭಾಗವಾಗಿರುವ ಬುರ್ಖಾವನ್ನು ಆತ್ಮಹತ್ಯಾ ದಾಳಿಗಳಿಗೂ ಬಳಸಲಾಗಿದೆ ಎಂಬುದನ್ನು ನೀವು ಒಪ್ಪಿಕೊಳ್ಳಬೇಕು. ಹಾಗಿದ್ದರೆ ಬುರ್ಖಾದಿಂದೇಕೆ ದೂರವಿರಬಾರದು? ಬುರ್ಖಾ ಎಂಬುದು ಯಾವುದೇ ಇಸ್ಲಾಮಿಕ್ ನೀತಿ ಸಂಹಿತೆಯ ಭಾಗವಲ್ಲ" ಎಂದು ಆಕೆ ಹೇಳಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಬುರ್ಖಾ ತೊಡದಂತೆ ನಾನು ಕೂಡ ನನ್ನ ವಿದ್ಯಾರ್ಥಿನಿಯರಿಗೆ ಸಲಹೆ ನೀಡುತ್ತಿದ್ದೇನೆ. ಅದರ ಬಗ್ಗೆ ಅಷ್ಟೊಂದು ದೊಡ್ಡ ಸಂಗತಿಯೇನಿದೆ ಎಂದು ಮೌಲಾನಾ ವಹಿಯುದ್ದೀನ್ ಖಾನ್ ಅವರ ಪುತ್ರಿಯೂ ಆಗಿರುವ ಫರೀದಾ ಪ್ರಶ್ನಿಸಿದ್ದಾರೆ.