ಸಿಜೆ ಎಲ್ಲ ಜಡ್ಜ್‌ಗಳ ಪರವಾಗಿ ಮಾತಾಡುವಂತಿಲ್ಲ: ಹೈಕೋ ಜಡ್ಜ್
ನವದೆಹಲಿ, ಶುಕ್ರವಾರ, 21 ಆಗಸ್ಟ್ 2009( 11:08 IST )
ನ್ಯಾಯಾಧೀಶರ ಆಸ್ತಿ ಬಹಿರಂಗಕ್ಕೆ ಕುರಿತಂತೆ ನ್ಯಾಯಾಂಗದ ಪರವಾಗಿ ಮುಖ್ಯನ್ಯಾಯಾಧೀಶರು ಮಾತನಾಡುವಂತಿಲ್ಲ ಎಂಬುದಾಗಿ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರ ಕುಮಾರ್ ಅಭಿಪ್ರಾಯಿಸಿದ್ದಾರೆ.
ಸಾಂವಿಧಾನಿಕ ರಕ್ಷಣೆ ಹಾಗೂ ವಿನಾಯಿತಿ ಹೊಂದಿರುವ ಉಚ್ಚನ್ಯಾಯಾಲಯಗಳ ನ್ಯಾಯಾಧೀಶರು ತಮ್ಮ ಆಸ್ತಿಯನ್ನು ಬಹಿರಂಗ ಪಡಿಸಲು ಸಿದ್ಧರಿಲ್ಲ ಎಂಬುದು ಸರಿಯಲ್ಲ ಎಂಬುದಾಗಿ ಶೈಲೇಂದ್ರ ಕುಮಾರ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಬರೆದಿದ್ದಾರೆ.
ಪತ್ರಿಕೆಯಲ್ಲಿ ಶೈಲೇಂದ್ರ ಕುಮಾರ್ ಅವರು ವ್ಯಕ್ತಪಡಿಸಿರುವ ಅಭಿಪ್ರಾಯದಿಂದಾಗಿ ಆಸ್ತಿಘೋಷಣೆಯ ಕುರಿತಂತೆ ನ್ಯಾಯಾಂಗದಲ್ಲಿ ಒಡಕು ಮೂಡಿದೆ ಎಂಬುದು ವೇದ್ಯವಾಗಿದೆ.
"ನ್ಯಾಯಿಕ ಜಾಗದಲ್ಲಿ ನ್ಯಾಯಾಧೀಶರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಅಥವಾ ಅವರಿಗೆ ಮಾತನಾಡುವ ಅಧಿಕಾರ ನೀಡಿದ್ದರೆ ಅಂತಹ ಸಂದರ್ಭಗಳ ಹೊರತಾಗಿ ಮುಖ್ಯನ್ಯಾಯಾಧೀಶರು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ಗಳ ಎಲ್ಲಾ ನ್ಯಾಯಾಧೀಶರ ಪರವಾಗಿ ಮಾತಾಡುವ ಅಧಿಕಾರವಿಲ್ಲ ಎಂದು ಅವರು ಹೇಳಿದ್ದಾರೆ. ನ್ಯಾಯಾಧೀಶರ ಆಸ್ತಿ ಬಹಿರಂಗ ಪಡಿಸಿದರೆ ಅವರಿಗೆ ಕಿರುಕುಳ ನೀಡಬಹುದು ಎಂಬ ಮುಖ್ಯನ್ಯಾಯಾಧೀಶರ ಅಭಿಪ್ರಾಯವನ್ನು ಉಲ್ಲೇಖಿಸಿರುವ ಶೈಲೇಂದ್ರ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.