ಕಳೆದೈದು ವರ್ಷಗಳಿಂದ ಜೈಲಿನಲ್ಲಿ ಇರುವ ವ್ಯಕ್ತಿಯೊಬ್ಬನನ್ನು ಪೊಲೀಸರು, ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆತಪ್ಪಿಸಿಕೊಂಡಿದ್ದಾನೆ ಎಂದು ಘೋಷಿಸಿದ್ದಾರೆ. ಅದಾಗ್ಯೂ ಈ ವ್ಯಕ್ತಿ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಆತನ ಜಾಮೀನು ಅರ್ಜಿಯನ್ನು ನಿರಾಕರಿಸಿದೆ.
ಪ್ರಕರಣದ ವಿವರಗಳ ಪ್ರಕಾರ, ಐಎಸ್ಐ ಫಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾವೇದ್ ಹಮಿದುಲ್ಲಾ ಸಿದ್ದಿಕ್ ಎಂಬ ವ್ಯಕ್ತಿಯನ್ನು ನಗರ ಪೊಲೀಸರು ಬಂಧಿಸಿದ್ದರು. ಸಿದ್ಧಿಕ್ ವಿರುದ್ಧ ನ್ಯಾಯಾಲಯದಲ್ಲಿ ಆರೋಪಪಟ್ಟಿಯನ್ನು ಸಲ್ಲಿಸಿದ್ದು ಆತನನ್ನು ಸಬರ್ಮತಿ ಕೇಂದ್ರೀಯ ಜೈಲಿನಲ್ಲಿ ಇರಿಸಲಾಗಿದೆ.
ಬಳಿಕ 2008ರಲ್ಲಿ ನಗರ ಪೊಲೀಸರು ಸಬರ್ಮತಿ ಜೈಲಿನಲ್ಲಿ ದಾಳಿ ನಡೆಸಿದ್ದ ವೇಳೆ ಸಿಡಿಗಳು, ಡಿವಿಡಿಗಳು, ಮೊಬೈಲ್ ಫೋನ್‌ಗಳು ಮತ್ತು ವಿದ್ಯುನ್ಮಾನ ವಸ್ತುಗಳು ಸೇರಿದಂತೆ ಹಲವಾರು ವಸ್ತುಗಳನ್ನು ಸಿದ್ಧಿಕ್ ಸೇರಿದಂತೆ ಹಲವಾರು ಕೈದಿಗಳಿಂದ ವಶಪಡಿಸಿಕೊಂಡಿದ್ದರು.
ಸಿದ್ದಿಕ್ ಪರ ವಕೀಲರಾಗಿರುವ ಇಲ್ಯಾಸ್‌ಖಾನ್ ಪಠಾಣ್ ಹೇಳುವಂತೆ, "2008ರಲ್ಲಿ ಸಬರ್ಮತಿ ಜೈಲಿನಲ್ಲಿ ಎರಡು ದಾಳಿಗಳನ್ನು ನಡೆಸಲಾಗಿತ್ತು. ಮೊದಲ ದಾಳಿಯ ಬಳಿಕ ದಾಖಲಾಗಿರುವ ಮೊದಲ ಪ್ರಕರಣದಲ್ಲಿ ಸಿದ್ಧಿಕ್ ತಲೆತಪ್ಪಿಸಿಕೊಂಡಿದ್ದಾನೆ ಎಂದು ಘೋಷಿಸಲಾಗಿದ್ದು, ಎರಡನೆ ದಾಳಿ ಬಳಿಕ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಕುತೂಹಲ ಎಂದರೆ, ಉಭಯ ಪ್ರಕರಣಗಳಲ್ಲೂ ಭರತ್ ಪಟೇಲ್ ಅವರು ತನಿಖಾಧಿಕಾರಿಯಾಗಿದ್ದಾರೆ. ಆದರೆ ಇದೊಂದು ನಿರ್ಲಕ್ಷ್ಯದ ಪ್ರಕರಣ ಎಂದು ಮೂಲಗಳು ಹೇಳಿವೆ.