ದಿನೇದಿನೇ ಹೆಚ್ಚುತ್ತಿರುವ ಹಂದಿಜ್ವರ ಬಲಿಗೆ ಶುಕ್ರವಾರ ಮತ್ತೊಂದು ಸೇರ್ಪಡೆಯಾಗಿದೆ. ತಮಿಳ್ನಾಡಿನ 47ರ ಹರೆಯದ ವ್ಯಕ್ತಿಯೊಬ್ಬರು ಚೆನ್ನೈಯಲ್ಲಿ ಸಾವನ್ನಪ್ಪುವುದರೊಂದಿಗೆ ರಾಷ್ಟ್ರದಲ್ಲಿ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 46ಕ್ಕೇರಿದೆ. ಈ ಮಧ್ಯೆ ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಅಜಾದ್ ಅವರು ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸರ್ಕಾರಗಳು ಸಾಕಷ್ಟು ಪ್ರಯತ್ನ ಮಾಡುತ್ತಿಲ್ಲ ಎಂದು ಹೇಳಿ ರಾಜ್ಯಗಳ ಮೇಲೆ ಗೂಬೆ ಕೂರಿಸಿದ್ದಾರೆ.
159 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 2,401ಕ್ಕೇರಿದೆ ಎಂಬುದಾಗಿ ಆರೋಗ್ಯ ಸಚಿವಾಲಯದ ಮೂಲಗಳು ಹೇಳಿವೆ. ಚೆನ್ನೈಯಲ್ಲಿ ಕಳೆದ ರಾತ್ರಿ ನಡುವಯಸ್ಸಿನ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಇಲ್ಲಿ ಈ ರೋಗದಿಂದ ಸತ್ತವರ ಸಂಖ್ಯೆ ಎರಡಕ್ಕೇರಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ 22 ಮಂದಿ ಸತ್ತಿದ್ದಾರೆ. ಕರ್ನಾಟಕದಲ್ಲಿ 11, ಗುಜರಾತಿನಲ್ಲಿ ಐದು, ದೆಹಲಿ, ಚತ್ತೀಸ್‌ಗಢ ಮತ್ತು ತಮಿಳ್ನಾಡಿನಲ್ಲಿ ಎರಡು ಮತ್ತು ಕೇರಳ ಹಾಗೂ ಉತ್ತರಖಂಡ್‌ನಲ್ಲಿ ತಲಾ ಒಂದು ಸಾವು ಸಂಭವಿಸಿದೆ.
ರಾಜ್ಯಗಳು ತಮ್ಮ ಜವಾಬ್ದಾರಿಯನ್ನು ಮರೆತಿವೆ ಎಂಬ ಗುರುತರ ಆರೋಪ ಹೊರಿಸಿರುವ ಅಜಾದ್, ಕೇಂದ್ರ ಸರ್ಕಾರವು ಈ ರೋಗವನ್ನು ತಡೆಯಲು ಗರಿಷ್ಠ ಕ್ರಮ ಕೈಗೊಳ್ಳುತ್ತಿದ್ದರೂ ರಾಜ್ಯಗಳು ಸಾಕಷ್ಟು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಹೇಳಿದ್ದಾರೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಆಂದೋಲನದ ಪರಾಮರ್ಷೆ ಸಭೆಯಲ್ಲಿ ರಾಜ್ಯಗಳ ಆರೋಗ್ಯಸಚಿವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, "ನಾವು ಒಂದು ಮಿತಿಯ ತನಕ ತೆರಳಬಹುದು, ಅದರಾಚೆಗೆ ಹೋಗಲು ಸಾಧ್ಯವಿಲ್ಲ" ಎಂದು ನುಡಿದರು. ಕೇಂದ್ರದ ಮಿತಿಯಾಚೆಗಿನ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳು ಹೊರಬೇಕು. ಇದನ್ನು ರಾಜ್ಯಗಳು ಮಾಡುತ್ತಿಲ್ಲ ಎಂದು ದೂರಿದರು.
ಸೋಂಕುಪತ್ತೆ, ಔಷಧಿಯ ಒದಗಣೆ, ಲಸಿಕೆ ನಿರೀಕ್ಷೆ, ವೈದ್ಯರಿಗೆ ತರಬೇತಿ ಸೇರಿದಂತೆ ಎಲ್ಲವನ್ನೂ ಕೇಂದ್ರವೇ ಮಾಡುತ್ತಿದೆ ಎಂದು ಅವರು ಒತ್ತಿಹೇಳಿದರು. ಕೇಂದ್ರವು ಕಠಿಣ ಪರಿಶ್ರಮ ಪಡುತ್ತಿದೆ. ರಾಜ್ಯ ಮಟ್ಟದ ಅಧಿಕಾರಿಗಳು ಕನಿಷ್ಠಪಕ್ಷ ರಾತ್ರಿ ಹತ್ತುಗಂಟೆಯ ತನಕ ಕುಳಿತು ಕೆಲಸ ಮಾಡಬೇಕು ಮತ್ತು ವರದಿಗಳನ್ನು ಕಳುಹಿಸಬೇಕು. ಇದುವರೆಗೂ ಕೇಂದ್ರದ ಮಧ್ಯಪ್ರವೇಶದಿಂದಾಗಿಯೇ ಯಶಸ್ಸು ಪಡೆಯಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಅಜಾದ್ ಅವರ ಭಾಷಣ ಮುಗಿದ ತಕ್ಷಣ ಅವರ ಹೇಳಿಕೆಯನ್ನು ಗುಜರಾತಿನ ಆರೋಗ್ಯ ಸಚಿವ ಜೆ.ಎನ್. ವ್ಯಾಸ್ ತೀವ್ರವಾಗಿ ಖಂಡಿಸಿದರು. ಒಬ್ಬ ಕೇಂದ್ರ ಸಚಿವರಾಗಿ ರಾಜ್ಯಗಳ ವಿರುದ್ಧ ಈ ರೀತಿಯ ಹೇಳಿಕೆ ನೀಡಬಾರದಿತ್ತು ಎಂದು ಆಕ್ಷೇಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಜಾದ್ ಯಾವುದೇ ರಾಜ್ಯವನ್ನು ಹೆಸರಿಸದೆ, ಕೆಲವು ರಾಜ್ಯಗಳು ನಿಜವಾಗಿಯೂ ಉತ್ತಮ ಕೆಲಸಮಾಡಿವೆ ಎಂದು ಹೇಳಿದರು.