ರಾಷ್ಟ್ರದ ರಾಜಧಾನಿಯಲ್ಲಿ ಇದ್ದಕ್ಕಿದ್ದಂತೆ ಹೂಂಕರಿಸಿರುವ ವರುಣನ ಅಬ್ಬರ ಬಿಸಿನ ಝಳಕ್ಕೆ ಕಂಗಾಲಾಗಿದ್ದ ಜನತೆಗೆ ತಂಪು ನೀಡಿದೆ ಮತ್ತು ತೊಂದರೆಗೆ ಸಿಲುಕಿದೆ. ಇದ್ದಕ್ಕಿದ್ದಂತೆ ಶುಕ್ರವಾರ ಅಪರಾಹ್ನ ಸುರಿದ ಮಳೆಯಿಂದಾಗಿ ತಾಪಮಾನವು 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಧಾರಾಕಾರ ಸುರಿದ ಗಾಳಿಮಳೆಯಿಂದಾಗಿ ಇಂದಿರಾಗಾಂಧಿ ವಿಮಾನ ನಿಲ್ದಾಣದ ಡೊಮೆಸ್ಟಿಕ್ ಡಿಪಾರ್ಚರ್ ಟರ್ಮಿನಸ್ 1ಡಿಯ ಛಾವಣಿ ಕುಸಿದಿದೆ.
ಇದಲ್ಲದೆ ಅಲ್ಲಲ್ಲಿ ನೀರು ತುಂಬಿದ್ದು ರಸ್ತೆ ಸಂಚಾರಕ್ಕೂ ಅಡ್ಡಿಯುಂಟಾಗಿದೆ. ಇದು ಸಹಜ ಮುಂಗಾರುಮಳೆ ಎಂಬುದಾಗಿ ಹವಾಮಾನ ಇಲಾಖೆ ಹೇಳಿದೆ. ಮುಂದಿನ 24 ಗಂಟೆಗಳ ಕಾಲ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗಲಿದೆ ಎಂಬುದಾಗಿಯೂ ಅದು ತಿಳಿಸಿದೆ.
ಬಿರುಗಾಳಿಯಿಂದ ಕೂಡಿದ ಭಾರೀ ಮಳೆಯು ಅಪರಾಹ್ನ ಮೂರು ಗಂಟೆಯ ಸುಮಾರಿಗೆ ಅಪ್ಪಳಿಸಿದ್ದು, ದೆಹಲಿಯ ಐಟಿಒ, ಕನ್ನೌಘಾಟ್, ಪ್ರಗತಿ ಮೈದಾನ್ ಪ್ರದೇಶಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ. ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ರಸ್ತೆಗಿಳಿಯುವುದೇ ಅಪಾಯಕಾರಿಯಾಗಿ ಕಂಡುಬಂದಿದೆ.