ಕಳೆದ ನವೆಂಬರ್‌ನಲ್ಲಿ ಉಗ್ರರು ನಡೆಸಿರುವ ಮುಂಬೈ ದಾಳಿಯಲ್ಲಿ ಜಮಾತ್ ಉದ್ ದಾವ ಸಂಸ್ಥಾಪಕ ಹಫೀಜ್ ಸಯೀದ್ ವಿರುದ್ಧ ಪುರಾವೆಗಳಿರುವ ದಾಖಲೆ ಕಡತವನ್ನು ಭಾರತ ಶುಕ್ರವಾರ ಪಾಕಿಸ್ತಾನಕ್ಕೆ ಒಪ್ಪಿಸಿದೆ.
ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಹಾಗೂ ಪಾಕಿಸ್ತಾನ ಹೈ ಕಮಿಷನರ್ ಶಾಹಿದ್ ಮಲಿಕ್ ಅವರ ಭೇಟಿಯ ವೇಳೆಗೆ ಈ ಕಡತವನ್ನು ಒಪ್ಪಿಸಲಾಗಿದೆ. ಪಾಕಿಸ್ತಾನಿ ರಾಯಭಾರಿಯವರ ವಿನಂತಿಯ ಮೇರೆಗೆ ಈ ಭೇಟಿ ನಡೆಸಲಾಗಿತ್ತು.
ಸಯೀದ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಕಷ್ಟು ಪುರಾವೆಗಳಿಲ್ಲ ಎಂಬುದಾಗಿ ಇದುವರೆಗೂ ಪಾಕಿಸ್ತಾನ ಪ್ರತಿಪಾದಿಸುತ್ತಲೇ ಬಂದಿತ್ತು. ದಾಳಿಗೆ ಸಂಬಂಧಿಸಿದಂತೆ ಭಾರತವು ಪಾಕಿಸ್ತಾನಕ್ಕೆ ಒಪ್ಪಿಸುತ್ತಿರುವ ಐದನೇ ಮಾಹಿತಿ ಕಡತ ಇದಾಗಿದೆ.
ಆಗಸ್ಟ್ 1ರಂದು ಭಾರತವು ನಾಲ್ಕನೆಯ ಮಾಹಿತಿ ಕಡತವನ್ನು ಒಪ್ಪಿಸಿತ್ತು. ಇದರಲ್ಲಿ ಮುಂಬೈ ದಾಳಿ ನಡೆಸಿರುವ ಉಗ್ರರು ಮತ್ತು ಅದರ ರೂವಾರಿಗಳ ನಡುವಿನ ದೂರವಾಣಿ ಸಂಭಾಷಣೆಯನ್ನು ನೀಡಲಾಗಿತ್ತು. ಅಂದು ಪತ್ರಿಕಾ ಗೋಷ್ಠಿ ನಡೆಸಿದ್ದ ಗೃಹಸಚಿವ ಪಿ. ಚಿದಂಬರಂ ಅವರು ಸಯೀದ್ ವಿರುದ್ಧ ಸಾಕಷ್ಟು ಪುರಾವೆ ಇದೆ ಎಂದು ಹೇಳಿದ್ದರು.
ದಾಳಿಯ ಬಳಿಕ ಪಾಕಿಸ್ತಾನದಲ್ಲಿ ಗೃಹಬಂಧನದಲ್ಲಿದ್ದ ಸಯೀದ್‌ನನ್ನು ಲಾಹೋರ್ ಹೈಕೋರ್ಟ್ ಸಾಕಷ್ಟು ಪುರಾವೆಗಳಿಲ್ಲದ ಕಾರಣ ಬಿಡುಗಡೆ ಮಾಡಿತ್ತು. ಇದೇ ಕಾರಣ ನೀಡಿದ್ದ ಪಾಕ್ ಸುಪ್ರೀಂಕೋರ್ಟ್ ಸಯೀದ್ ವಿರುದ್ಧದ ವಿಚಾರಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತ್ತು.