ಆಡ್ವಾಣಿಯವರೇ ಪಕ್ಷದ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ಹೇಳಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜ್‌ನಾಥ್ ಸಿಂಗ್ ಅವರು ಅಶಿಸ್ತು ಮತ್ತು ಭಿನ್ನಮತವನ್ನು ಪಕ್ಷವು ಸಹಿಸುವುದಿಲ್ಲ ಎಂಬ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ.
ಮೂರು ದಿನಗಳ ಕಾಲ ನಡೆದ ಚಿಂತನ ಬೈಠಕ್‌ನಲ್ಲಿ ಲೋಕಸಭಾ ಸೋಲಿನ ಕುರಿತು ಚರ್ಚಿಸಲಾಗಿದೆ. ಆದರೆ ಯಾರನ್ನೂ ಇದಕ್ಕೆ ಉತ್ತರದಾಯಿಯಾಗಿ ಅಥವಾ ಜವಾಬ್ದಾರರನ್ನಾಗಿ ಮಾಡಲಿಲ್ಲ ಎಂದು ಹೇಳಿದ್ದಾರೆ.
ಯಾರಾದರೂ ಉತ್ತರದಾಯಿಯಾಗಿರಬೇಕು ಎಂದಾದಲ್ಲಿ, ತಾನು ಸೋಲಿನ ಜವಾಬ್ದಾರಿ ಹೊರುವುದಾಗಿ ಅವರು ಹೇಳಿದರು. ಅವರು ಬೈಠಕ್‌ನ ಅಂತ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಯುವನಾಯಕತ್ವದ ಕುರಿತು ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರ ಒಲವಿನ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಬಿಜೆಪಿಯು ಯುವಕರನ್ನು ಹಿಂದಿನಿಂದಲೂ ಸೇರಿಸಿಕೊಳ್ಳುತ್ತಿದೆ. ನಾವಿದನ್ನು ಹಿಂದಿನಿಂದಲೂ ಮಾಡುತ್ತಲೇ ಬಂದಿದ್ದೇವೆ ಎಂಬುದಾಗಿ ನುಡಿದರು.
ಜಸ್ವಂತ್ ಉಚ್ಚಾಟನೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ, ಪಕ್ಷದ ಸಿದ್ಧಾಂತದೊಂದಿಗೆ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು ಮತ್ತು ಅಶಿಸ್ತನ್ನು ಪಕ್ಷವು ಸಹಿಸುವುದಿಲ್ಲ ಎಂದು ಪುನರುಚ್ಚರಿಸಿದರು.