ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣಾ ಫಲಿತಾಂಶ ಶುಕ್ರವಾರ ಹೊರಬಿದ್ದಿದ್ದು ವಿವಿಧ ಪಕ್ಷಗಳಿಗೆ ಮಿಶ್ರಫಲ ಲಭಿಸಿದೆ. ಉತ್ತರ ಪ್ರದೇಶದಲ್ಲಿ ಬಿಎಸ್ಪಿ, ತಮಿಳ್ನಾಡಿನಲ್ಲಿ ಡಿಎಂಕೆ ಹಾಗೂ ಕಾಂಗ್ರೆಸ್ ಮೈತ್ರಿಕೂಟ, ಮೇಘಾಲಯದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಆಡಳಿತಾರೂಢ ಸಿಪಿಎಂ ಅನ್ನು ಹಿಂದಿಕ್ಕಿದೆ.
ಉತ್ತರ ಪ್ರದೇಶದ ವಿಧಾನ ಸಭೆಯ ನಾಲ್ಕು ಸ್ಥಾನಗಳಿಗೆ ನಡೆದಿದ್ದ ಉಪಚುನಾವಣೆಯಲ್ಲಿ ಮಾಯಾರ ಬಿಎಸ್ಪಿ ಮೂರು ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ ಸೇರಿದಂತೆ ಮಿಕ್ಕಪಕ್ಷಗಳು ಹಿನಾಯ ಸೋಲು ಕಂಡಿವೆ.
ಮೇಘಾಲಯ ವಿಧಾನಸಭೆಯ ಐದು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಪಶ್ಚಿಮ ಬಂಗಾಳದ ಎರಡೂ ಸ್ಥಾನಗಳನ್ನೂ ತೃಣಮೂಲ ಕಾಂಗ್ರೆಸ್ ಗೆದ್ದುಕೊಂಡಿದ್ದು, ಕಮ್ಯೂನಿಸ್ಟ್ ಪಕ್ಷಕ್ಕೆ ತೀವ್ರ ಸೋಲು ಕಂಡಿದೆ.
ತಮಿಳ್ನಾಡಿನಲ್ಲಿ ನಡೆದ ಉಪಚುನಾವಣೆಯಲ್ಲಿ ಎಲ್ಲಾ ಐದು ಕ್ಷೇತ್ರಗಳನ್ನು ಡಿಎಂಕೆ-ಕಾಂಗ್ರೆಸ್ ಮೈತ್ರಿ ಕೂಟ ಗೆದ್ದುಕೊಂಡಿದೆ. ಡಿಎಂಕೆ ಮೂರು ಸ್ಥಾನಗಳು ಹಾಗೂ ಕಾಂಗ್ರೆಸ್ ಎರಡು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇಲ್ಲಿ ಪ್ರಮುಖ ವಿರೋಧಪಕ್ಷವಾಗಿರುವ ಎಐಎಡಿಎಂಕೆ ಮತ್ತು ಪಿಎಂಕೆ ಮೈತ್ರಿಕೂಟ ಸ್ಫರ್ಧಿಸಿರಲಿಲ್ಲ. ಚುನಾವಣೆಯು ನ್ಯಾಯಯುತವಾಗಿ ನಡೆಯುವುದಿಲ್ಲ ಎಂದು ದೂರಿದ್ದ ವಿರೋಧಿ ಮೈತ್ರಿಕೂಟವು ಚುನಾವಣೆ ಬಹಿಷ್ಕರಿಸಿದ್ದ ಕಾರಣ ಡಿಎಂಕೆ ಮೈತ್ರಿಕೂಟ ಸುಲಭ ಜಯ ಸಾಧಿಸಿತ್ತು.