ರಾಜೀವ್ ಗಾಂಧಿ ಜನ್ಮದಿನಾಚರಣೆಯ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಕಾಂಗ್ರೆಸ್ ಶಾಸಕನೊಬ್ಬ ಒತ್ತಾಯ ಪೂರ್ವಕವಾಗಿ ರಕ್ತದಾನ ಮಾಡಿಸಿದ ಪ್ರಸಂಗ ಸಂಭವಿಸಿದೆ. ಇಲ್ಲಿನ ಚೋಮು ಗ್ರಾಮದಲ್ಲಿ ಕಾಂಗ್ರೆಸ್ ಶಾಸಕ ಭಗವಾನ್ ಸಹಾಯ್ ಸೈನಿ ಎಂಬ ಶಾಸಕರು ಪುಟ್ಟ ಮಕ್ಕಳನ್ನು ರಕ್ತದಾನ ಮಾಡುವಂತೆ ಒತ್ತಾಯಿಸಿರುವುದಾಗಿ ವರದಿಯಾಗಿದೆ.
ಈ ಘಟನೆಯನ್ನು ವಿರೋಧ ಪಕ್ಷ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಪಕ್ಷದ ವಿದ್ಯಾರ್ಥಿ ದಳವಾದ ಎಬಿವಿಪಿಯು ಶಾಸಕರ ಪ್ರತಿಕೃತಿ ದಹನ ಮಾಡಿದರು. ಈ ಪ್ರತಿಭಟನೆಯಲ್ಲಿ ಸ್ಥಳೀಯ ನಾಯಕರೂ ಸೇರಿಕೊಂಡಿದ್ದು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. 18ರ ಹರೆಯದ ಕೆಳಗಿನ ವಯಸ್ಸಿನ ಮಕ್ಕಳು ರಕ್ತದಾನ ಮಾಡಿದ ವೇಳೆಗೆ ಶಾಸಕರು ಉಪಸ್ಥಿತರಿದ್ದರು ಎಂದು ಸ್ಥಳೀಯರು ದೂರಿದ್ದಾರೆ.
ಅನಿಲ್ ಶರ್ಮಾ ಎಂಬ 15ರ ಹರೆಯ ವಿದ್ಯಾರ್ಥಿ ರಕ್ತನೀಡಿದ ಬಳಿಕ ಪ್ರಜ್ಞೆ ತಪ್ಪಿಬಿದ್ದಿದ್ದು, ಆತನನ್ನು ಬಳಿಕ ಜೈಪುರದ ಎಸ್ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ ಪರಿಸ್ಥಿತಿ ಈಗ ಸ್ಥಿರವಾಗಿದೆ. ತನ್ನ ಪುತ್ರ ಅಪ್ರಾಪ್ತ ಮತ್ತು ಆತ ಇತ್ತೀಚೆಗೆ ಅರಶಿನಕಾಮಾಲೆಯಿಂದ ಬಳಲಿದ್ದ ಎಂದು ಹೇಳಿದ್ದರೂ ತಮ್ಮ ಮಾತನ್ನು ಕಡೆಗಣಿಸಿ ಆತನ ರಕ್ತ ಪಡೆಯಲಾಗಿದೆ ಎಂಬುದಾಗಿ ಅನಿಲ್‌ನ ತಂದೆ ದೂರಿದ್ದಾರೆ.
ಅದಾಗ್ಯೂ, ಶಾಸಕ ಸೈನಿ ಅವರು ಈ ಆರೋಪವನ್ನು ತಳ್ಳಿಹಾಕಿದ್ದು, ಪರಿಣಿತ ವೈದ್ಯಕೀಯ ತಂಡವು ಶಿಬಿರವನ್ನು ನಡೆಸಿದ್ದು ಯಾವುದೇ ವಿದ್ಯಾರ್ಥಿಗಳನ್ನು ರಕ್ತದಾನ ಮಾಡುವಂತೆ ಒತ್ತಾಯಿಸಿಲ್ಲ ಎಂದು ಹೇಳಿದ್ದಾರೆ.