ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಹಿರಿಯ ರಾಜಕಾರಣಿ, ಮಾಜಿ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಅವರು ಆಡ್ವಾಣಿ ವಿರುದ್ಧ ವಾಗ್ಧಾಳಿಯನ್ನು ನಿಲ್ಲಿಸುವಂತೆ ತೋರುತ್ತಿಲ್ಲ. ಇದೀಗ ಅವರು ಒಂದೊಂದೆ ಹುಳುಕುಗಳನ್ನು ಹೆಕ್ಕಲು ಆರಂಭಿಸಿದ್ದಾರೆ.
ಕಾಂಧಹಾರ್ ವಿಮಾನ ಅಪಹರಣದ ವೇಳೆ ವಿಮಾನ ಪ್ರಯಾಣಿಕರ ಬಿಡುಗಡೆಗೆ ಬದಲಾಗಿ ಉಗ್ರರನ್ನು ಬಿಡುಗಡೆ ಮಾಡುವ ವಿಚಾರವು ಆಡ್ವಾಣಿಯವರಿಗೆ ತಿಳಿದಿತ್ತಾದರೂ ಅವರು ತಿಳಿದಿಲ್ಲ ಎಂದಿದ್ದನ್ನು ತಾನು ಸಮರ್ಥಿಸಿದ್ದೆ ಎಂದು ಜಸ್ವಂತ್ ಹೇಳಿದ್ದಾರೆ. ಕಳೆದ ಲೋಕಸಭಾ ಚುನಾವಣೆ ವೇಳೆಗೆ ಉಗ್ರರನ್ನು ಕರೆದೊಯ್ದು ಬಿಟ್ಟವರು ನೀವು ಎಂಬುದಾಗಿ ಕಾಂಗ್ರೆಸ್ ಟೀಕಿಸಿದ್ದಾಗ ಆ ವಿಚಾರ ತನಗೆ ತಿಳಿದೇ ಇರಲಿಲ್ಲ ಎಂಬುದಾಗಿ ಆಡ್ವಾಣಿ ಹೇಳಿದ್ದರು.
ಐಸಿ-814 ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಬದಲಾಗಿ ಜಿಹಾದಿ ಉಗ್ರರ ಬಿಡುಗಡೆ ನಿರ್ಧಾರವು ಆಡ್ವಾಣಿ ಅವರಿಗೆ ಚೆನ್ನಾಗಿ ತಿಳಿದಿತ್ತು ಎಂಬುದಾಗಿ ಟಿವಿವಾಹಿನಿಗಳೊಂದಿಗೆ ಮಾತನಾಡುತ್ತಾ ಜಸ್ವಂತ್ ಸಿಂಗ್ ಹೇಳಿದ್ದಾರೆ.
ತನಗೆ ಕಾಂಧಹಾರ್ ಮಿಶನ್ ಬಗ್ಗೆ ತಿಳಿದಿರಲಿಲ್ಲ ಎಂಬುದಾಗಿ ಆಡ್ವಾಣಿ ನಿರಾಕರಿಸಿದ್ದ ಬಳಿಕ ತಾನು ಆಡ್ವಾಣಿಯವರನ್ನು ಭೇಟಿಯಾಗಿದ್ದೆ. ಆ ವೇಳೆ "ನಿಮಗೇನು ಹೇಳಬೇಕೆನ್ನಿಸುತ್ತೋ ಹಾಗೆ ಹೇಳಿ" ಎಂದಿದ್ದರು ಎಂಬುದಾಗಿ ಜಸ್ವಂತ್ ಹೇಳಿದ್ದಾರೆ. ನಾನು ಆಡ್ವಾಣಿಯವರನ್ನು ಸಮರ್ಥಿಸಿದ್ದೆ. ಇದು ನನ್ನ ಬದ್ಧತೆ ಮತ್ತು ನಿಷ್ಠೆ ಎಂಬುದಾಗಿ ನಾನು ತಿಳಿದಿದ್ದೆ. ಆದರೆ ನನ್ನ ಭಾವನೆಗಳಗೆ ಆಡ್ವಾಣಿಯವರು ಸೂಕ್ತವಾಗಿ ಪ್ರತಿಸ್ಪಂದಿಸಿಲ್ಲ ಎಂದು ಅವರು ದೂರಿದ್ದಾರೆ.