ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿಗೆ ಮತ್ತೊಂದು ಹೊಡೆತ: ಕುಲಕರ್ಣಿ ರಾಜಿನಾಮೆ (BJP | Advani | Sudheendra Kulkarni | India)
 
ಆಂತರಿಕ ಸಮಸ್ಯೆಗಳಿಂದ ಬಳಲುತ್ತಿರುವ ಬಿಜೆಪಿಗೆ ಜಸ್ವಂತ್ ಸಿಂಗ್ ಪ್ರಕರಣ ಹಸಿಯಾಗಿರುವಾಗಲೇ ಮತ್ತೊಂದು ಆಘಾತ ಎದುರಾಗಿದೆ. ಎಲ್‌.ಕೆ. ಅಡ್ವಾಣಿ ಮತ್ತು ಎ.ಬಿ. ವಾಜಪೇಯಿಯವರ ಆಪ್ತರೆಂದೇ ಗುರುತಿಸಿಕೊಂಡಿದ್ದ ಕರ್ನಾಟಕ ಮೂಲದ ಸುಧೀಂದ್ರ ಕುಲಕರ್ಣಿ ಕೇಸರಿ ಪಕ್ಷದಿಂದ ಹೊರ ಬರುತ್ತಿರುವುದನ್ನು ಪ್ರಕಟಿಸಿದ್ದಾರೆ.

ಕಳೆದ 13 ವರ್ಷಗಳಿಂದ ಬಿಜೆಪಿ ಜತೆಗಿದ್ದ ಕುಲಕರ್ಣಿ, ಪಕ್ಷದ ಜತೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದ ಕಾರಣ ಸಂಬಂಧ ಕಡಿದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.

ಕೆಲವು ವಾರಗಳ ಹಿಂದೆಯೇ ನಾನು ಬಿಜೆಪಿ ತೊರೆಯಲು ನಿರ್ಧರಿಸಿದ್ದೆ. ಪಕ್ಷದ ಜತೆಗೆ ನನಗೆ ಕೆಲವು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದವು. ಹಾಗಾಗಿ ನನ್ನ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಅರ್ಥಪೂರ್ಣ ಕೊಡುಗೆಯನ್ನು ನೀಡಲು ನನ್ನಿಂದ ಸಾಧ್ಯವಿಲ್ಲ ಎಂಬುದನ್ನು ಮನಗಂಡು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಆದರೆ ಪಕ್ಷದ ಹಿತಚಿಂತಕನಾಗಿ ತಾನು ಮುಂದುವರಿಯಲಿರುವುದಾಗಿ ಕುಲಕರ್ಣಿ ತಿಳಿಸಿದ್ದಾರೆ. ಪಕ್ಷದ ಕಾರ್ಯನಿರ್ವಹಣೆ ಮತ್ತು ಇತ್ತೀಚಿನ ಕೆಲವು ಪ್ರಕರಣಗಳನ್ನು ನಿಭಾಯಿಸಲು ಬಿಜೆಪಿ ವಿಫಲವಾಗಿರುವುದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಅವರು, ಬಿಜೆಪಿಯ ಆಂತರಿಕ ವಿಚಾರಗಳ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಲು ಇಚ್ಛಿಸುವುದಿಲ್ಲ. ಅದರಲ್ಲಿ ಏನಾಗುತ್ತಿದೆ ಎಂಬುದು ಜನರಿಗೇ ಗೊತ್ತು ಎಂದರು.

ಅದೇ ಹೊತ್ತಿಗೆ ತಾನು ಅಡ್ವಾಣಿಯವರ ಬಗ್ಗೆ ಶ್ರೇಷ್ಠ ಗೌರವ ಹೊಂದಿದ್ದು, ವಾಜಪೇಯಿಯವರ ಜತೆ ಸೇರಿಕೊಂಡು ಪಕ್ಷವನ್ನು ತಳಮಟ್ಟದಿಂದ ಕಟ್ಟಿದ ಬಿಜೆಪಿಯ ಉನ್ನತ ನಾಯಕರ ಗೌರವಕ್ಕೆ ಕುಂದುಂಟಾಗದು ಎಂದಿದ್ದಾರೆ.

ಅಡ್ವಾಣಿ ಮತ್ತು ವಾಜಪೇಯಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕುಲಕರ್ಣಿ ಚುನಾವಣೆಗಳಲ್ಲಿ ತಂತ್ರಗಾರಿಕೆ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದರು.

ಬಿಜೆಪಿ ನಾಯಕ ಜಸ್ವಂತ್ ಸಿಂಗ್‌ರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾದ ಇತ್ತೀಚಿನ ವಿವಾದದ ಬಗೆಗಿನ ಪ್ರಶ್ನೆಯೊಂದು ಬಂದಾಗ ಕುಲಕರ್ಣಿ, ಶಿಸ್ತು ಕ್ರಮದ ತೆಗೆದುಕೊಳ್ಳುವಂತಹ ಯಾವುದೇ ವಿಚಾರಗಳನ್ನು ಅವರು ಬರೆದಿರಲಿಲ್ಲ; ಜಸ್ವಂತ್ ಪುಸ್ತಕವನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ